ಧಾರವಾಡ: ಸತತ ಎಂಟು ಬಾರಿ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಬಸವರಾಜ ಹೊರಟ್ಟಿ ಅವರಿಗೆ ಧಾರವಾಡದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಬೆಳಗಾವಿಯಿಂದ ಧಾರವಾಡಕ್ಕೆ ಬಂದ ಬಸವರಾಜ ಹೊರಟ್ಟಿ ಅವರನ್ನು ಶಿಕ್ಷಕ ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಲ್ಲದೇ ತೆರೆದ ವಾಹನದ ಮೂಲಕ ಮೆರವಣಿಗೆ ಸಹ ಮಾಡಿದರು.
ಧಾರವಾಡದ ಕರ್ನಾಟಕ ಕಾಲೇಜು ವೃತ್ತದಲ್ಲಿರುವ ಗಣೇಶನ ದೇವಸ್ಥಾನಕ್ಕೆ ತೆರಳಿದ ಹೊರಟ್ಟಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ತೆರೆದ ವಾಹನದ ಮೂಲಕ ಕಡಪಾ ಮೈದಾನದವರೆಗೆ ಹೊರಟ್ಟಿ ಅವರನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಈ ಗೆಲುವು ಶಿಕ್ಷಕರ ಗೆಲುವು. ನನ್ನ ಮೇಲೆ ಏನೆಲ್ಲ ಆಪಾದನೆ ಮಾಡಿದವರಿಗೆ ಶಿಕ್ಷಕರು ಉತ್ತರ ಕೊಟ್ಟಿದ್ದಾರೆ.
ಶಿಕ್ಷಕರ ಈ ಉತ್ತರದ ಮೇಲೆ ಆಪಾದನೆ ಮಾಡಿದವರೆಲ್ಲ ಇನ್ನು ಮುಂದೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕು ಎಂದ ಅವರು, ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗುತ್ತೀರಾ ಎಂಬ ಪ್ರಶ್ನೆಗೆ, ನನ್ನ ಜುಟ್ಟು ಮಹೇಶ ಟೆಂಗಿನಕಾಯಿ ಅವರ ಕೈಯಲ್ಲಿದೆ ಎಂದು ಹಾಸ್ಯ ಚಟಾಕಿ ಸಿಡಿಸಿ, ಬಿಜೆಪಿ ಹೈಕಮಾಂಡ್ ಯಾವ ರೀತಿ ಹೇಳುತ್ತದೆಯೋ ಆ ರೀತಿ ನಡೆದುಕೊಳ್ಳುತ್ತೇನೆ ಎಂದರು.
ಮೆರವಣಿಗೆಯಲ್ಲಿ ಜಾಂಜ್ ಮೇಳದವರು ಪಾಲ್ಗೊಂಡಿದ್ದರು. ಹೊರಟ್ಟಿ ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ, ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
Kshetra Samachara
15/06/2022 08:07 pm