ಧಾರವಾಡ: ಮನುಷ್ಯನಿಗೆ ವಿಶ್ರಾಂತಿ ಬೇಕು. 40-42 ವರ್ಷದಿಂದ ಹೊರಟ್ಟಿ ರಾಜಕಾರಣ ಮಾಡುತ್ತಿದ್ದಾರೆ. 30-35 ವರ್ಷ ವಯಸ್ಸಿನ ಶಿಕ್ಷಕರು ಏನಾದರೂ ಕೆಲಸಕ್ಕೆ ಹೋದರೆ ಅವರಿಗೆ ಕೆಟ್ಟ ಶಬ್ದಗಳನ್ನು ಬಳಕೆ ಮಾಡಿ ದುರಹಂಕಾರ ಪ್ರದರ್ಶಿಸುತ್ತಾರೆ. ಬರುವ ದಿನದಲ್ಲಿ ದುರಹಂಕಾರದ ಮಾತುಗಳೇ ಅವರಿಗೆ ಮುಳುವಾಗುತ್ತವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಿಕ್ಷಕರ ಅನೇಕ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಶಿಕ್ಷಕರ ನೇಮಕಾತಿ, ಡಿಗ್ರಿ ಕಾಲೇಜು, ಪದವಿಪೂರ್ವ ಕಾಲೇಜು ತೆರೆಯುವಂತಹ ಯೋಜನೆ ಹಾಕಿದ್ದು ಕುಮಾರಸ್ವಾಮಿ ಅವರು. ಶಾಲೆಗಳಿಗೆ ಹೆಚ್ಚು ಒತ್ತು ಕೊಟ್ಟವರೇ ಕುಮಾರಸ್ವಾಮಿ ಅವರು. ಹೀಗಾಗಿ ಕುಮಾರಸ್ವಾಮಿ ಅವರ ಕೆಲಸದಿಂದ ನಮ್ಮ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಅವರು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಹೊರಟ್ಟಿ ಅವರ ಹೊಂದಾಣಿಕೆ ರಾಜಕಾರಣಕ್ಕೆ ಅನೇಕ ಜನ ಶಿಕ್ಷಕರು ಬೇಸತ್ತಿದ್ದಾರೆ. ಹೊರಟ್ಟಿ ಬಿಜೆಪಿ ಸೇರಿದ್ದಕ್ಕೆ ಬೇಸರ ಇಲ್ಲ. ನಮ್ಮ ಪಕ್ಷಕ್ಕೆ ನಮ್ಮದೇ ಆದ ಮತದಾರರಿದ್ದಾರೆ. ಹೊರಟ್ಟಿ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದಾಗ ಚುನಾವಣಾ ತಂತ್ರಗಾರಿಕೆ ಹೂಡಿದವರೇ ಗಡದಿನ್ನಿ ಅವರು. ನಮಗೆ ಒಳಹೊಡೆತ, ಹೊರಹೊಡೆತ ಎರಡೂ ಗೊತ್ತಿವೆ. ಬಿಜೆಪಿಗೆ ಹೊರಟ್ಟಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಮುಂದೆ ಎಸ್.ಎಂ.ಕೃಷ್ಣಾ ಅವರಿಗೆ ಆದ ಗತಿ ಇವರಿಗೂ ಆಗುತ್ತದೆ. ವಯಸ್ಸಿನ ಕಾರಣದಿಂದ ಎಸ್.ಎಂ.ಕೃಷ್ಣಾ ಅವರನ್ನು ಹೇಗೆ ನಿರ್ಲಕ್ಷ ಮಾಡಿದ್ದಾರೋ ಅದೇ ರೀತಿ ಹೊರಟ್ಟಿ ಅವರಿಗೂ ಮಾಡುತ್ತಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/05/2022 10:24 pm