ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅದರಲ್ಲೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ರಣ ಕಣ ರಂಗೇರಿದೆ. ಏಕೆಂದರೆ, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಶೈಲ ನಿಂಗಪ್ಪ ಗಡದಿನ್ನಿ ಅವರನ್ನು ಕಣಕ್ಕೆ ಇಳಿಸಲು ದಳಪತಿಗಳು ನಿರ್ಧರಿಸಿದ್ದಾರೆ. ಹೊರಟ್ಟಿ ಅವರ ಒಂದು ಕಾಲದ ಶಿಷ್ಯ, ಇದೀಗ ಗುರುವಿಗೇ ತಿರುಮಂತ್ರ ಹಾಕಲು ಹೊರಟಿದ್ದಾರೆ..
ಹೌದು..ವಿಧಾನ ಪರಿಷತ್ ಚುನಾವಣೆಯಲ್ಲಿ ಸತತವಾಗಿ 7 ಬಾರಿ ಗೆದ್ದು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇತಿಹಾಸ ನಿರ್ಮಿಸಿದವರು ಬಸವರಾಜ ಹೊರಟ್ಟಿ. ಇವರಿಗೆ ಈ ಬಾರಿ ಅವರ ಆತ್ಮೀಯ ಶಿಷ್ಯನೇ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಶ್ರೀಶೈಲ್ ಗಡದಿನ್ನಿ ಹೊರಟ್ಟಿ ಅವರ ಗರಡಿಯಲ್ಲಿ ಪಳಗಿರುವ ಮತ್ತು ಒಂದು ಕಾಲದಲ್ಲಿ ಬಸವರಾಜ ಹೊರಟ್ಟಿ ಅವರಿಗೆ ಅತ್ಯಂತ ಆತ್ಮೀಯ ಮತ್ತು ಪಟ್ಟದ ಶಿಷ್ಯ ಎಂದೇ ಗುರುತಿಸಿಕೊಂಡಿದ್ದರು. ಈ ಹಿಂದೆ ದಶಕಗಳ ಕಾಲ ಜೆಡಿಎಸ್‌ನಲ್ಲಿದ್ದ ಬಸವರಾಜ ಹೊರಟ್ಟಿ, ಸಾಕಷ್ಟು ಹುದ್ದೆಗಳನ್ನ ಅಲಂಕರಿಸಿ ಸಚಿವರಾಗಿ ಹಾಗೂ ವಿಧಾನ ಪರಿಷತ್ ಸಭಾಪತಿಗಳೂ ಆಗಿದ್ದರು. ಜೆಡಿಎಸ್ ಪಕ್ಷ ಇಷ್ಟೊಂದು ಸ್ಥಾನ ಮಾನ ಕೊಟ್ಟರೂ ಸಹ ಇದೀಗ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿರುವುದರಿಂದ ಸಹಜವಾಗಿಯೇ ಜೆಡಿಎಸ್ ವರಿಷ್ಠರಲ್ಲಿ ಹಾಗೂ ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. ಹೀಗಾಗಿ, ಬಸವರಾಜ ಹೊರಟ್ಟಿ ಅವರನ್ನು ಪಶ್ಚಿಮ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಲು ಅವರ ಶಿಷ್ಯ ಬಳಗದಲ್ಲೇ ಗುರುತಿಸಿಕೊಂಡಿದ್ದ ಶಿಕ್ಷಕರೊಬ್ಬರನ್ನು ಜೆಡಿಎಸ್ ವತಿಯಿಂದ ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಶಾಲೆಯ ಶಿಕ್ಷಕರಾಗಿದ್ದ ಶ್ರೀಶೈಲ ಗಡದಿನ್ನಿ ಈಗಾಗಲೇ ಸ್ವಯಂ ನಿವೃತ್ತಿಯನ್ನೂ ಪಡೆದು ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಈ ಹಿಂದೆ ಹೊರಟ್ಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಡದಿನ್ನಿ, ಇದೀಗ ಹೊರಟ್ಟಿ ಅವರಿಗೆ ಎದುರಾಳಿಯಾಗಿ ನಿಂತಿದ್ದಾರೆ..
ಬಸವರಾಜ ಹೊರಟ್ಟಿ ಜೆಡಿಎಸ್‌ನಿಂದ ಕಾಲ್ಕೀಳುತ್ತಿದ್ದಂತೆಯೇ, ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್‌ಗೆ ಅಭ್ಯರ್ಥಿಯೇ ಇಲ್ಲದಂತಾಗಿತ್ತು. ಈ ವೇಳೆ, ಗಡದಿನ್ನಿ ಅವರ ಹೆಸರು ಕೇಳಿ ಬಂತು. ಹೀಗಾಗಿ, ಮೊದಲಿಗೆ ಇವರ ಜೊತೆ ಒಂದೆರಡು ಬಾರಿ ಮಾತುಕತೆ ನಡೆಸಿದ ವರಿಷ್ಠರು, ನಂತರ ಇವರಿಗೇ ಟಿಕೆಟ್ ನೀಡಲು ನಿರ್ಧರಿಸಿದ್ರು ಎನ್ನಲಾಗಿದೆ. ಗಡದಿನ್ನಿ ಅವರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಪದಾಧಿಕಾರಿಗಳೂ ಸಹ ಬೆಂಬಲ ನೀಡಿದ್ದಾರಂತೆ. ಇದೇ ಸಂಘದ ಪ್ರಮುಖರೇ ಗಡದಿನ್ನಿ ಅವರಿಗೆ ಜೆಡಿಎಸ್ ಸೇರಿ ಅಭ್ಯರ್ಥಿ ಆಗುವಂತೆ ಒತ್ತಾಯ ಮಾಡುತ್ತಿದ್ದರಂತೆ. ಇದೀಗ ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೆ ಮುಹೂರ್ತ ಕೂಡಿ ಬಂದಿದ್ದು, ಈ ಸುಸಂದರ್ಭಕ್ಕೆ ಹುಬ್ಬಳ್ಳಿ ವೇದಿಕೆ ಆಗಲಿದೆ..
ಸತತ ಏಳು ಬಾರಿ ಗೆದ್ದು ಪರಿಷತ್ ಪ್ರವೇಶ ಮಾಡಿರುವ ಹೊರಟ್ಟಿ ಎಂಟನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿ ಬಸವರಾಜ ಹೊರಟ್ಟಿಗೆ ಶಿಷ್ಯನ ವಿರೋಧಿ ಆಗಿದ್ದಾನೆ. ಶಿಕ್ಷಕರರು ಗುರುವಿಗೆ ಸೈ ಅಂತಾರಾ..? ಶಿಷ್ಯನಿಗೆ ಜೈ ಎನ್ನುತ್ತಾರಾ..? ಎಂಬುದು ಮಾತ್ರ ಚುನಾವಣೆ ಫಲಿತಾಂಶ ಬಂದಾಗ ತಿಳಿಯಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/05/2022 09:08 pm