ಧಾರವಾಡ: ಒಂಬತ್ತು ತಿಂಗಳ ನಂತರ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಿರುವಾಗ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎನ್ನುವ ಒತ್ತಾಯ, ಪ್ರತಿಭಟನೆಗಳೂ ನಡೆಯುತ್ತಿವೆ. ಇದರ ಜೊತೆಗೆ ಧಾರವಾಡದ ಪಾಲಿಕೆ ಸದಸ್ಯರಿಗೇ ಮೇಯರ್ ಪಟ್ಟ ನೀಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಪಾಲಿಕೆ ಚುನಾವಣೆ ನಡೆದು, ಸದಸ್ಯರೂ ಆಯ್ಕೆಯಾಗಿ ಒಂಬತ್ತು ತಿಂಗಳು ಕಳೆದರೂ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಇದೀಗ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಧಾರವಾಡದ ಕೆಲ ಸದಸ್ಯರು ಮೇಯರ್, ಉಪಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಸೀನಿಯಾರಿಟಿ ವಿಭಾಗದಲ್ಲಿ ಈರೇಶ ಅಂಚಟಗೇರಿ ಹಾಗೂ ವಿಜಯಾನಂದ ಶೆಟ್ಟಿ ಅವರು ಇದೀಗ ಮೇಯರ್ ಪಟ್ಟದ ಪೈಪೋಟಿಯಲ್ಲಿದ್ದಾರೆ. ಇವರು ಧಾರವಾಡದವರೇ ಆಗಿದ್ದು, ಧಾರವಾಡದವರಿಗೆ ಮೇಯರ್ ಪಟ್ಟ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಪ್ರತ್ಯೇಕ ಮಹಾನಗರ ಪಾಲಿಕೆಗೆ ಒತ್ತಾಯಿಸುತ್ತಿರುವವರೂ ಧಾರವಾಡದವರಿಗೇ ಮೇಯರ್ ಪಟ್ಟ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇತ್ತ ಉಪಮೇಯರ್ ಸ್ಥಾನಕ್ಕೆ
ಅನಿತಾ ಚಳಗೇರಿ ಹಾಗೂ ಜ್ಯೋತಿ ಪಾಟೀಲ ಅವರು ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಧಾರವಾಡಕ್ಕೆ ಮೇಯರ್ ಸ್ಥಾನ ನೀಡಿದರೆ, ಅನಿವಾರ್ಯವಾಗಿ ಹುಬ್ಬಳ್ಳಿಯವರಿಗೆ ಉಪಮೇಯರ್ ಸ್ಥಾನ ನೀಡಲೇಬೇಕಾಗುತ್ತದೆ. ಒಟ್ಟಾರೆಯಾಗಿ ಧಾರವಾಡಕ್ಕೆ ಪ್ರಸಕ್ತ ವರ್ಷ ಮೇಯರ್ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಬಿಜೆಪಿ ನಾಯಕರು ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
13/05/2022 02:40 pm