ಧಾರವಾಡ : ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಿಂದೂ ಸಂಘಟನೆ ಕಾರ್ಯಕರ್ತರ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಒಬ್ಬರನ್ನು ಮನೆಯಲ್ಲಿಟ್ಟಿದ್ದಾರೆ. ಇನ್ನೊಬ್ಬರನ್ನು ಬೇರೆ ಕಡೆ ಇಟ್ಟಿದ್ದಾರೆ. ಕುಮಾರಸ್ವಾಮಿ ಅವರು ಮೊದಲು ತಮ್ಮ ಇನ್ನೊಬ್ಬ ಪತ್ನಿಗೂ ಸಮಾನತೆ ನೀಡಲಿ. ನಂತರ ಹಿಂದೂ ಕಾರ್ಯಕರ್ತರ ಬಗ್ಗೆ ಮಾತನಾಡಲಿ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಧಾರವಾಡದ ಗ್ರಾಮೀಣ ಠಾಣೆಗೆ ಮುತ್ತಿಗೆ ಹಾಕಿದ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹಿಂದೂ ಸಂಘಟನೆ ಕಾರ್ಯಕರ್ತರ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ನಾವು ಕೊನೆಯ ಎಚ್ಚರಿಕೆ ನೀಡುತ್ತೇವೆ. ಮುಂದೆ ನಿಮ್ಮ ಮನೆಯ ಎದುರು ಉಗ್ರ ರೀತಿಯ ಹೋರಾಟಕ್ಕೆ ನಾವು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದೂ ಸಂಘಟನೆ ಕಾರ್ಯಕರ್ತರು ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿಲ್ಲ. ಇದನ್ನು ಸ್ವತಃ ಆ ವ್ಯಕ್ತಿ ಕೂಡ ಹೇಳಿದ್ದಾನೆ. ಆತನ ಕಲ್ಲಂಗಡಿ ಹಣ್ಣನ್ನು ಮಾತ್ರ ಒಡೆದಿದ್ದಾರೆ. ಪೊಲೀಸರು ಅದಕ್ಕೆ ಮಾತ್ರ ದಂಡ ವಿಧಿಸಬೇಕಿತ್ತು. ಆದರೆ, ಕಾರ್ಯಕರ್ತರ ಮೇಲೆ ವಿವಿಧ ಸೆಕ್ಷನ್ ಹಾಕಿ ದೂರು ದಾಖಲಿಸಿದ್ದಾರೆ. ನುಗ್ಗಿಕೇರಿ ಟ್ರಸ್ಟ್ನವರಿಗೆ ಮೊದಲೇ ಮನವಿ ಕೊಡಲಾಗಿತ್ತು. ಆದರೂ ಅವರು ಅಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಈ ಘಟನೆಗೆ ನೇರವಾಗಿ ಆ ದೇವಸ್ಥಾನ ಟ್ರಸ್ಟ್ನವರೇ ಹೊಣೆ ಎಂದರು.
ಹಿಂದೂ ಕಾರ್ಯಕರ್ತರು ಆ ಮುಸ್ಲಿಂ ವ್ಯಕ್ತಿಗೆ, ದೇವಸ್ಥಾನ ಟ್ರಸ್ಟ್ ಕಮಿಟಿಯವರು ನಿಮಗೆ ಏನೂ ಹೇಳಿಲ್ವಾ ಎಂದು ಕೇಳಿದಾಗ ಆ ವ್ಯಕ್ತಿ ಹಿಂದೂ ಕಾರ್ಯಕರ್ತರಿಗೆ ಏಕವಚನದಲ್ಲಿ ಮಾತನಾಡಿದ್ದಾನೆ. ಇದರಿಂದ ಆತನ ಕಲ್ಲಂಗಡಿ ಹಣ್ಣುಗಳನ್ನು ಒಡೆದಿದ್ದಾರೆ. ಆದರೆ, ಮುಸ್ಲಿಂ ಸಮಾಜಕ್ಕೆ ಹೆದರಿ ಪೊಲೀಸರು ಕೇಸ್ ಹಾಕುವ ಕೆಲಸ ಮಾಡಿದ್ದಾರೆ. ಧಾರವಾಡದಲ್ಲಿ ಎಲ್ಲೆಲ್ಲಿ ಹಿಂದೂ ದೇವಾಲಯಗಳ ಮುಂದೆ ಮುಸ್ಲಿಂ ಅಂಗಡಿಗಳಿವೆಯೋ ಅವುಗಳನ್ನು ಪೊಲೀಸರೇ ತೆರವುಗೊಳಿಸಬೇಕು. ಇಲ್ಲದೇ ಹೋದರೆ ಮುಂದೆ ನಾವೇ ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/04/2022 10:12 pm