ಧಾರವಾಡ: ಸರ್ಕಾರ ದುಡ್ಡು ಕೊಟ್ಟು, ಅಧಿಕಾರ ಕೊಟ್ಟರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲದಿದ್ದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾಕೆ ಬೇಕು? ಎಂದು ವಿವಿಧ ಇಲಾಖೆ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ತರಾಟೆಗೆ ತೆಗೆದುಕೊಂಡರು.
ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ 4ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿ ಆಗದೇ ಬಾಕಿ ಉಳಿದಿವೆ ಎಂದರೆ ಏನರ್ಥ. ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಜನರು ಶುದ್ಧ ನೀರು ಕುಡಿಯುವುದು ಬೇಡವೇ...? ಯಾವುದೇ ಘಟಕ ಸ್ಥಗಿತವಾದರೂ ಮೂರು ದಿನಗಳಲ್ಲಿಯೇ ಅದರ ರಿಪೇರಿ ಆಗಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಶಾಸಕ ಸಿ.ಎಂ. ನಿಂಬಣ್ಣವರ ಪಿಎಂಜಿಎಸ್‍ವೈ ಯೋಜನೆ ಕುರಿತು ಮಾತನಾಡಿ, ಎಲ್ಲೆಡೆ ರಸ್ತೆ ಮಾಡುತ್ತಾರೆ. ಆದರೆ, ಮೂರ್ನಾಲ್ಕು ತಿಂಗಳಲ್ಲಿ ತೆಗ್ಗು ಗುಂಡಿಗಳು ಬೀಳುತ್ತವೆ. ಅಧಿಕಾರಿಗಳಿಗೆ ಹೇಳೋರು, ಕೇಳೋರು ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಇದಕ್ಕೆ ದನಿಗೂಡಿಸಿದ ಸಚಿವ ಆಚಾರ, ರಸ್ತೆಗಳು ಪೂರ್ಣವಾದ ಮೇಲೆ ಅವುಗಳ ವೀಕ್ಷಣೆ ಮಾಡುವುದಿಲ್ಲವೇ. ಅವರಿಗೆ ಸರಿಯಾಗಿ ರಸ್ತೆ ನಿರ್ಮಿಸಲು ಹೇಳಿ. ಇಲ್ಲದಿದ್ದರೆ ಹಣ ಬಿಡುಗಡೆ ಮಾಡಬೇಡಿ ಎಂದು ತಾಕೀತು ಮಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪಿಡಬ್ಲುಡಿ ಮುಖ್ಯ ಎಂಜಿನಿಯರ್ ಅವರಿಗೆ ಹುಬ್ಬಳ್ಳಿ, ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರವೇ ಕಾಣದಂತಾಗಿದೆ. ಅಲ್ಲಿಯ ಸಾಕಷ್ಟು ರಸ್ತೆಗಳು ಹಾಳಾದರೂ ಅವುಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಅಲ್ಲದೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಿಂದ ಚೆನ್ನಮ್ಮ ವೃತ್ತದವರೆಗೆ 28 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮಾಡಿದರೂ ಸಂಪೂರ್ಣ ಕಳಪೆ ಆಗಿದೆ. ಯಾವ ಎಂಜಿನಿಯರ್ ಸಹ ಅದರ ಪರಿಶೀಲನೆ ಮಾಡದೇ 26 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.
ಇದರಿಂದ ಆಕ್ರೋಶಗೊಂಡ ಸಚಿವ ಹಾಲಪ್ಪ ಆಚಾರ, ಈ ರೀತಿಯ ಕಳಪೆ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳು ವಿಶೇಷ ತನಿಖೆ ನಡೆಸಿ ಬಾಕಿ ಉಳಿದಿರುವ ಹಣ ಬಿಡುಗಡೆ ಮಾಡಬೇಡಿ. ಕೆಲಸ ಸಮರ್ಪಕವಾದಾಗ ಮಾತ್ರ ಹಣ ಬಿಡುಗಡೆ ಮಾಡಿ ಎಂದು ಸೂಚಿಸಿದರು.
ಅದೇ ರೀತಿ ಕಲಘಟಗಿ ತಾಲೂಕಿನ ಒಂದೇ ಗ್ರಾಮದಲ್ಲಿ 19 ಅಕ್ರಮ ಮದ್ಯದ ಅಂಗಡಿಗಳಿದ್ದು, ಜನರನ್ನು ಸಾವಿನತ್ತ ದೂಡುತ್ತಿದ್ದಾರೆ. ಇದೆಲ್ಲವೂ ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ನಿಂಬಣ್ಣವರ ಮನವಿಗೆ ಸ್ಪಂದಿಸಿದ ಸಚಿವರು, ಕೂಡಲೇ ಅಲ್ಲಿಯ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಅಳ್ನಾವರದ ಹುಲಿಕೇರಿ ಹಾಗೂ ಧಾರವಾಡ ಸಮೀಪದ ಮುಗದ ಕೆರೆಗಳ ಅಭಿವೃದ್ಧಿ ಕುರಿತು ಬೇಸರ ವ್ಯಕ್ತಪಡಿಸಿದ ಸಚಿವ ಹಾಲಪ್ಪ ಆಚಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹುಲಿಕೇರಿಗೆ 9.20 ಕೋಟಿ ಹಣ ಬಿಡುಗಡೆಯಾಗಿದ್ದು, ಮಳೆಗಾಲದೊಳಗೆ ಕಾಮಗಾರಿ ಮುಗಿಸಲು ಶಾಸಕ ಸಿ.ಎಂ. ನಿಂಬಣ್ಣವರ ಪ್ರಸ್ತಾಪಿಸಿದರು. ಅಲ್ಲದೇ ಮೂರು ವರ್ಷಗಳಿಂದ ಮುಗದ ಕೆರೆ ಕಟ್ಟೆ ಒಡೆದಿದ್ದು 98 ಎಕರೆ ಪ್ರದೇಶದ ಈ ಕೆರೆ ಕಟ್ಟೆ ಕಟ್ಟಲು ಏನಾಗಿದೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಅವುಗಳ ದುರಸ್ತಿಗೆ ಸಮಗ್ರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
Kshetra Samachara
08/04/2022 09:36 pm