ಹುಬ್ಬಳ್ಳಿ: ಕಾಂಗ್ರೆಸ್ ಕೇವಲ ಪ್ರಚಾರ, ವೋಟ್ ಬ್ಯಾಂಕ್ ಗಾಗಿ ಪಾದಯಾತ್ರೆ ನಡೆಸುತ್ತಿದ್ದು, ಅವರಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ ವಿಧಾನಮಂಡಲದಲ್ಲಿ ಚರ್ಚಿಸಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಯೋಜನೆ ವಿಚಾರ ಅತ್ಯಂತ ಸೂಕ್ಷ್ಮವಾದದ್ದು, ಆದರೆ ಇದನ್ನು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವಿಧಾನಸಭೆ ಕಲಾಪ ನಡೆದಾಗ ಅಲ್ಲಿ ಇವರು ಚರ್ಚೆ ಮಾಡೋದಿಲ್ಲ. ಅದನ್ನು ಬಿಟ್ಟು ಇದೀಗ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಸದನದಲ್ಲಿ ಕಾಂಗ್ರೆಸ್ ವಿನಾಕಾರಣ ಕಾಲಹರಣ ಮಾಡಿ, ಇದೀಗ ಪಾದಯಾತ್ರೆ ಮಾಡುವ ಹೊರಗೂ ಕಾಲಹರಣ ಮಾಡುತ್ತಿದೆ ಎಂದು ಹರಿಹಾಯ್ದರು.
ಮಹದಾಯಿ ವಿಚಾರದಲ್ಲಿಯೂ ಕಾಂಗ್ರೆಸ್ ನಿಂದ ದ್ವಂದ್ವ ನಿಲುವಿದ್ದು, ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ನೀರು ಬಿಡೋದಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಇಲ್ಲಿನ ಕಾಂಗ್ರೆಸ್ಸಿಗರು ಮಹದಾಯಿಗಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳತ್ತಾ ಇದ್ದಾರೆ. ಹಾಗಾಗಿ ಕಾಂಗ್ರೆಸ್ ನವರು ಮೊದಲು ದ್ವಂದ್ವ ನಿಲುವನ್ನು ಬಿಡಲಿ. ಮುಂದೆ ಬಜೆಟ್ ಅಧಿವೇಶನವಿದ್ದು, ಅಲ್ಲಿ ಬಂದು ಚರ್ಚೆ ಮಾಡಲಿ ಎಂದು ಹೇಳಿದರು.
Kshetra Samachara
27/02/2022 01:09 pm