ಧಾರವಾಡ: ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಗೆಲುವಿಗೆ ಗುಂಪೊಂದು ರಣತಂತ್ರ ಹೆಣೆದಿದೆ. ಇಲ್ಲಿ ಕೆಲ ಪ್ರಭಾವಿಗಳು ತಮ್ಮ ರಾಜಕೀಯ ಶಕ್ತಿ ಬಳಸಿಕೊಂಡು ಶೇ.75ರಷ್ಟು ಸದಸ್ಯರನ್ನು ಮತದಾರ ಪಟ್ಟಿಯಿಂದಲೇ ಹೊರಗಿಟ್ಟು ಚುನಾವಣೆ ನಡೆಸಲು ಸಿದ್ಧರಾಗಿದ್ದಾರೆ. ಮಾತ್ರವಲ್ಲದೇ ಬದುಕಿದ ಕೆಲ ಸದಸ್ಯರನ್ನೇ ಮೃತಪಟ್ಟಿದ್ದಾರೆ ಎಂದು ಅನರ್ಹ ಮತದಾರರ ಪಟ್ಟಿಗೆ ಸೇರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯಾದವಾಡ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬರೋಬ್ಬರಿ 391 ಸದಸ್ಯರಿದ್ದಾರೆ. ಇನ್ನೂ 260ಕ್ಕೂ ಹೆಚ್ಚು ಜನ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೆ, ಇಲ್ಲಿ ಹೊಸ ಅರ್ಜಿಗಳನ್ನು ಪುರಸ್ಕರಿಸದಿದ್ದರೂ ಈಗಾಗಲೇ ಸದಸ್ಯತ್ವ ಹೊಂದಿದ 391 ಜನರ ಪೈಕಿ 314 ಜನರನ್ನು ಮತದಾನಕ್ಕೆ ಅನರ್ಹರರು ಎಂದು ಘೋಷಿಸಲಾಗಿದೆ. ಹೀಗಾಗಿ ಸೊಸೈಟಿಯ ಈ ಹಿಂದಿನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿರುವ ಸದಸ್ಯರು ಮಂಗಳವಾರ ಪ್ರತಿಭಟನೆ ಕೂಡ ನಡೆಸಿದರು. ಜೊತೆಗೆ ಮತಪಟ್ಟಿ ಪರಿಷ್ಕರಿಸಿದ ನಂತರವೇ ಚುನಾವಣೆ ನಡೆಸುವಂತೆ ಆಗ್ರಹಿಸಿದರು.
314 ಸದಸ್ಯರ ಮತಹಕ್ಕು ಅನರ್ಹಗೊಳಿಸಲು ಸಭೆಗಳಿಗೆ ಗೈರು ಹಾಜರಾತಿ ಹಾಗೂ ಮರಣ ಹೊಂದಿರುವುದಾಗಿ ಕಾರಣ ಹೇಳಲಾಗಿದೆ. ಈ ಮಧ್ಯೆ ಅನರ್ಹಗೊಂಡ ಸುಮಾರು 4 ರಿಂದ 5 ಜನ ಬದುಕಿದ್ದರೂ ಅವರು ಮರಣ ಹೊಂದಿದ್ದಾರೆ ಎಂಬ ಸಬೂಬು ನೀಡಲಾಗಿದೆ. ಸಭೆಗೆ ಗೈರು ಹಾಜರಾಗಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರಾದರೂ ಸಭೆ ನಡೆಸದೆಯೇ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಘದ ಚುನಾವಣೆ ಪ್ರತಿಬಾರಿಯೂ ಇದೇ ರೀತಿ ತೆರೆಮರೆಯಲ್ಲಿಯೇ ನಡೆದುಕೊಂಡು ಬಂದಿದೆ. ಇಲ್ಲಿ ತಮಗೆ ಬೇಕಾದವರಿಗೆ ಮಾತ್ರ ಮತದಾನದ ಹಕ್ಕು ನೀಡಿ ಗೆಲ್ಲಲಾಗುತ್ತಿದೆ. ಸಂಘದ ಸರ್ವ ಸದಸ್ಯರಿಗೆ ಮತದಾನ ಹಕ್ಕು ನೀಡಿದರೆ ರೈತರ ಏಳಿಗೆ ಬಯಸುವ ವ್ಯಕ್ತಿಗಳು ಗೆಲ್ಲಲು ಸಾಧ್ಯ. ಅದನ್ನು ಬಿಟ್ಟು ಅನ್ಯಮಾರ್ಗವಾಗಿ ಅಧಿಕಾರ ಹಿಡಿಯುವುದು ಯಾವ ಪುರುಷಾರ್ಥಕ್ಕೆ. ಇದೆಲ್ಲವನ್ನು ನೋಡಿದಾಗ ಈ ಹಿಂದಿನ ಅವಧಿಯಲ್ಲಿ ಅಕ್ರಮಗಳು ನಡೆದಿವೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಇದು ಏಕಪಕ್ಷಿಯ ಚುನಾವಣೆ. ಅಧಿಕಾರಿಗಳು ಏಕೆ ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
Kshetra Samachara
05/01/2022 08:09 am