ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರೈತರ ಮೇಲೆ ಹಲ್ಲೆ: ಉನ್ನತಮಟ್ಟದ ತನಿಖೆಯಾಗಲಿ

ಧಾರವಾಡ: ಬೆಳಗಾವಿ ಸುವರ್ಣಸೌಧದ ಬಳಿ ಸೋಮವಾರ ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ರೈತ ಮುಖಂಡ ಹಾಗೂ ಹಿರಿಯ ವಕೀಲ ಪಿ.ಎಚ್.ನೀರಲಕೇರಿ ಸರ್ಕಾರವನ್ನು ಆಗ್ರಹಿಸಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಪೊಲೀಸರ ವರ್ತನೆಯ ಹೊಣೆಯನ್ನು ಗೃಹಸಚಿವ ಅರಗ ಜ್ಞಾನೇಂದ್ರ ಹೊತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನವು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ರೈತರ ಸಮಸ್ಯೆಗಳ ಕುರಿತು ಗಮನಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪರವಾನಗಿ ಕೂಡ ಪಡೆಯಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಸಾಯಂಕಾಲ 6 ಗಂಟೆಯವರೆಗೆ ಶಾಂತ ರೀತಿಯಾಗಿ ಪ್ರತಿಭಟನೆ ಮಾಡಿದರೂ ಸರ್ಕಾರದ ಪರವಾಗಿ ಯಾವುದೇ ಪ್ರತಿನಿಧಿ ಬಂದು ಮನವಿ ಸ್ವೀಕರಿಸದೇ ರೈತರನ್ನು ನಿರ್ಲಕ್ಷ್ಯ ಮಾಡಲಾಯಿತು. ಆಗ ಅಲ್ಲಿ ಸೇರಿದ್ದ ರೈತರೆಲ್ಲರೂ ಪ್ರತಿಭಟನಾ ಸ್ಥಳದಿಂದ ಹೊರ ಬರುವ ಸಂದರ್ಭದಲ್ಲಿ ರೈತರ ಮೇಲೆ ಪೋಲೀಸ್ ಅಧಿಕಾರಿಗಳು ಹಲ್ಲೆ ನಡೆಸಿ ಅಮಾನುಷವಾಗಿ ವರ್ತಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರದ ನೀತಿ-ಕಾರ್ಯಕ್ರಮಗಳ ವಿರುದ್ಧ ಹೋರಾಡುವ ಹಕ್ಕು ಎಲ್ಲರಿಗಿದೆ. ಆದರೆ, ಪೊಲೀಸರು ದಬ್ಬಾಳಿಕೆ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದ ವಯೋವೃದ್ಧ ಮತ್ತು ಅಮಾಯಕ ರೈತರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ತಮ್ಮ ಮೇಲೆಯೂ ಪೊಲೀಸ್ ಅಧಿಕಾರಿಯೊಬ್ಬರು ದೌರ್ಜನ್ಯ ಮೆರೆದಿದ್ದಾರೆ. ರೈತರ ಜೊತೆ ಅನುಚಿತವಾಗಿ ವರ್ತಿಸಿದ ಪೊಲೀಸರ ಕ್ರಮವನ್ನು ಅಖಂಡ ಕರ್ನಾಟಕ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.

ಜೊತೆಗೆ ಶಾಲಾ ಮಕ್ಕಳಿಗೆ ಮೊಟ್ಟೆ ನಿಡುವ ಸರ್ಕಾರದ ವಿರುದ್ಧ ನಮ್ಮಂತೆ ಶಾಂತಯುತವಾಗಿ ಧರಣಿ ನಡೆಸುತ್ತಿದ್ದ ಹಲವಾರು ಸ್ವಾಮೀಜಿಗಳ ಮೇಲೆಯೂ ಹಲ್ಲೆ ನಡೆದಿದೆ. ಒಂದು ಕಡೆ ರೈತರ ಹೋರಾಟಕ್ಕೆ ಕಿಮ್ಮತ್ತು ಕೊಡದ ಸರ್ಕಾರ ಪೊಲೀಸರನ್ನು ಬಳಸಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸ್ಪಂದಿಸದೇ ದುರಹಂಕಾರದಿಂದ ನಡೆದುಕೊಂಡಿದ್ದಾರೆ.

ಆದ್ದರಿಂದ ಸರ್ಕಾರ ಈ ಘಟನೆ ಕುರಿತು ಉನ್ನತ ಪಟ್ಟದ ತನಿಖೆ ನಡೆಸಬೇಕು. ಗೃಹಸಚಿವ ಅರಗ ಜ್ಞಾನೇಂದ್ರ ಅವರಿಗೆ ಸ್ವಲ್ಪವಾದರೂ ಜ್ಞಾನ ಇದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ. ಇಲ್ಲದಿದ್ದರೆ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ನೀರಲಕೇರಿ, ಸರ್ಕಾರ ಇದಾವುದಕ್ಕೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

21/12/2021 08:54 pm

Cinque Terre

57.17 K

Cinque Terre

1

ಸಂಬಂಧಿತ ಸುದ್ದಿ