ಧಾರವಾಡ: ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಕ್ಕದಲ್ಲೇ ಇರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಎಸ್‌ಡಿಎಂ ಕಾಲೇಜು ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊರೊನಾ ಸ್ಪೋಟಗೊಂಡು ಜಿಲ್ಲೆಯ ಜನರನ್ನು ದಿಗ್ಭ್ರಮೆಗೊಳಿಸಿತ್ತು. ಇದೀಗ ಅದೇ ಸಭಾಭವನದಲ್ಲಿ ನಡೆದ ಮದುವೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ.
ಹೌದು! ಎಸ್‌ಡಿಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 306 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಸುತ್ತ 500 ಮೀಟರ್ ವ್ಯಾಪ್ತಿಯೊಳಗಿನ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಸಹ ನೀಡಿದ್ದಾರೆ. ಸದ್ಯ ಆಸ್ಪತ್ರೆ ಪಕ್ಕವೇ ಇರುವ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮದುವೆ ನಡೆದಿದ್ದು, ಅದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಭಾಗಿಯಾಗಿದ್ದಾರೆ. ಆದರೆ, ಕಂಟೈನ್ಮೆಂಟ್ ಝೋನ್‌ನಿಂದ ಹೊರಗಡೆ ಈ ಕಲಾಕ್ಷೇತ್ರ ಬರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ ನಂತರವೇ ನಾನು ಮದುವೆಗೆ ಬಂದಿದ್ದೇನೆ. ಅಲ್ಲದೇ ಈ ಮದುವೆಗೆ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರನ್ನೇ ಒಳಗಡೆ ಬಿಟ್ಟಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಹೆಗ್ಗಡೆ ಕಲಾಕ್ಷೇತ್ರದ ಆವರಣ ಮತ್ತು ಒಳಾಂಗಣದಲ್ಲಿ ಈಗಾಗಲೇ ಎರಡ್ಮೂರು ಬಾರಿ ಸ್ಯಾನಿಟೈಜೆಶನ್ ಮಾಡಲಾಗಿದ್ದು, ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮದುವೆ, ಸಭೆಗಳಿಗೆ ಅನುಮತಿ ನೀಡಲಾಗುತ್ತಿದೆ.
ಹೆಗ್ಗಡೆ ಕಲಾಕ್ಷೇತ್ರದಲ್ಲಿನ ಕಾರ್ಯಕ್ರಮಗಳಿಗೆ ಆಗಮಿಸುವ ಆಗಮನ ಮತ್ತು ನಿರ್ಗಮನಕ್ಕೆ ಇರುವ ಸ್ಥಳವು ಪ್ರತ್ಯೇಕವಾಗಿರುತ್ತದೆ. ಕಳೆದ ರವಿವಾರದಿಂದ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೇವಲ ನೂರು ಜನರಿಗೆ ಮಾತ್ರ ಅಲ್ಲಿ ಅವಕಾಶ ಕಲ್ಪಸಲಾಗಿದ್ದು, ಪ್ರತಿಯೊಬ್ಬರಿಗೂ ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ. ಮತ್ತು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ.
ವಿದ್ಯಾರ್ಥಿಗಳಿರುವ ಎರಡು ವಸತಿ ನಿಲಯ ಹಾಗೂ ಎಸ್‌ಡಿಎಂ ಆಸ್ಪತ್ರೆಯನ್ನು ಹೊರತುಪಡಿಸಿ, ಉಳಿದ ಕಡೆಗೆ ಎಲ್ಲೂ ಕಂಟೈನ್ಮೆಂಟ್ ಝೋನ್ ಅಥವಾ ಸೀಲ್‌ಡೌನ್ ಪ್ರದೇಶವೆಂದು ಆದೇಶಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Kshetra Samachara
01/12/2021 01:52 pm