ಧಾರವಾಡ: ನಿಮಗೆ ತಾಕತ್ತಿದ್ದರೆ ನಿಮ್ಮ ಕ್ಷೇತ್ರದಲ್ಲೇ ಇರುವ ಅನ್ಯ ಧರ್ಮದ ಧಾರ್ಮಿಕ ಕೇಂದ್ರವನ್ನು ತೆರವುಗೊಳಿಸಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕ್ಷೇತ್ರದಲ್ಲಿ ಬೇರೊಂದು ಧರ್ಮದ ಧಾರ್ಮಿಕ ಕೇಂದ್ರ ಉಳಿಸಿದ್ದಾರೆ. ನಿಮಗೆ ಜವಾಬ್ದಾರಿ ಇದ್ದಿದ್ದೇ ನಿಜವಾದರೆ ಇಲ್ಲಿಯೂ ಕ್ರಮ ಕೈಗೊಳ್ಳಿ. ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ಬಂಕಾಪುರ ಬಳಿ ಆ ಧಾರ್ಮಿಕ ಕೇಂದ್ರ ಇದೆ. ತಾಕತ್ತಿದ್ದರೆ ನಿಮ್ಮ ಕ್ಷೇತ್ರದಲ್ಲಿರುವ ಧಾರ್ಮಿಕ ಕೇಂದ್ರ ತೆರವುಗೊಳಿಸಿ ನೋಡೋಣ ಎಂದಿದ್ದಾರೆ.
ಸಿಎಂ ತಮ್ಮ ಕ್ಷೇತ್ರದಲ್ಲಿ ಮಾತ್ರ ಡಬಲ್ ರೋಡ್ ಮಾಡೋದನ್ನು ನಿಲ್ಲಿಸಿದ್ದಾರೆ. ಬೇರೆ ಧರ್ಮದ ಧಾರ್ಮಿಕ ಸ್ಥಳ ಅಲ್ಲಿದೆ. ಆ ಧಾರ್ಮಿಕ ಸ್ಥಳ ಮುಟ್ಟಬಾರದು ಅಂತಾ ಕೈಬಿಟ್ಟಿದ್ದಾರೆ. ಹಿಂದೂ ದೇವಾಲಯ, ವೀರಶೈವ ಮಠಗಳನ್ನು ಬೇಕಾಬಿಟ್ಟಿ ಏನೇನೋ ಮಾಡುತ್ತಿದ್ದೀರಿ ತೆರವುಗೊಳಿಸುವ ಕಾನೂನು ಪಾಲನೆ ಮಾಡುವವರಾದರೆ ಇಲ್ಲಿಯೂ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಬೇರೆ ಕಡೆ ತೆರವಿಗೆ ಅವಕಾಶ ಕೊಟ್ಟಿದ್ದೀರಿ. ಆದ್ರೆ ನಿಮ್ಮ ಸ್ವಂತ ಕ್ಷೇತ್ರದಲ್ಲಿ ಏನು ಮಾಡುತ್ತಿದ್ದೀರಿ? ನಡು ರಸ್ತೆಯಲ್ಲೇ ಆ ಧಾರ್ಮಿಕ ಸ್ಥಳ ಇದೆ. ರಸ್ತೆ ಮಧ್ಯದಲ್ಲೇ ಇರೋದನ್ನು ನಾವು ಗುರುತಿಸಿದ್ದೇವೆ. ರಾಜ್ಯದಲ್ಲಿ ಎಷ್ಟು ದೇವಾಲಯ ನಾಶ ಮಾಡಿದ್ದೀರಿ. ಉಳಿದ ಧಾರ್ಮಿಕ ಸ್ಥಳ ಎಷ್ಟು ರಕ್ಷಣೆ ಮಾಡಿದ್ದೀರಿ? ಇದು ಯಾವ ಸಿದ್ಧಾಂತ? ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.
Kshetra Samachara
18/09/2021 05:35 pm