ಧಾರವಾಡ: ಮೈಸೂರಿನ ನಿರಂಜನ ಮಠ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಈಗ ಆ ಮಠವನ್ನು ತೆಗೆದು ಹಾಕಿ ಅಲ್ಲಿ ವಿವೇಕ ಸ್ಮಾರಕ ನಿರ್ಮಾಣ ಮಾಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂಜನ ಮಠಕ್ಕೆ 200 ವರ್ಷಗಳ ಇತಿಹಾಸವಿದೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಆ ಮಠಕ್ಕೆ ಭೇಟಿ ನೀಡಿದ್ದರು ಎಂಬ ಕಾರಣಕ್ಕೆ ಅವರ ನೆನಪಿಗಾಗಿ ಅಲ್ಲಿ ವಿವೇಕ ಸ್ಮಾರಕ ಮಾಡಲು ಹೊರಟಿದ್ದಾರೆ. ಒಂದು ಧರ್ಮದ ಇತಿಹಾಸವನ್ನು ನಾಶ ಮಾಡಿ ಹೊಸದೊಂದು ಇತಿಹಾಸ ಸೃಷ್ಟಿ ಮಾಡಲು ಮುಂದಾಗಿರುವುದು ಸರಿಯಲ್ಲ. ಸದಾನಂದಗೌಡರು ಸಿಎಂ ಆಗಿದ್ದ ಅವಧಿಯಲ್ಲಿ ಆ ಮಠದ ಒಂದು ಎಕರೆ ಜಾಗವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ವಿವೇಕ ಸ್ಮಾರಕ ನಿರ್ಮಿಸಲು ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಕೊಂಡು 5 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ. ಸುಧೀರ್ಘ ಒಂದು ಇತಿಹಾಸ ಹೊಂದಿರುವ ನಿರಂಜನ ಮಠದ ಪರಂಪರೆಯನ್ನು ನಾಶ ಮಾಡಿ ಹೊಸದೊಂದು ಇತಿಹಾಸ ಸೃಷ್ಟಿ ಮಾಡಲು ಮುಂದಾಗಿದ್ದು ಖಂಡನೀಯ. ಆಗ ಸದಾನಂದ ಗೌಡರ ಕಾಲದಲ್ಲಿ ನಿರಂಜನ ಮಠಕ್ಕೆ ಹಿನ್ನಡೆಯಾಗಿದೆ. ಈಗಲೂ ಅದೇ ಆಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಧರ್ಮದ ಜಾಗದಲ್ಲಿ ವಿವೇಕ ಸ್ಮಾರಕ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸರ್ಕಾರ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಬಸವಣ್ಣನ ಮೂರ್ತಿ ಪ್ರತಿಷ್ಟಾಪನೆ ಬಗ್ಗೆ ಏಕೆ ನಿರ್ಧಾರ ಕೈಗೊಳ್ಳಬಾರದು ಎಂದು ಸ್ವಾಮೀಜಿ ಪ್ರಶ್ನಿಸಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿಗಳು ವೀರಶೈವ ಲಿಂಗಾಯತ ಸಮಾಜದವರು ಸಾಂಸ್ಕೃತಿಕ ದಾಳಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ನಾವು ಸಾಂಸ್ಕೃತಿಕ ದಾಳಿ ಮಾಡಿಲ್ಲ. ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದೇವೆ ಎಂದರು.
ನಾನು ಮೈಸೂರಿಗೆ ಹೋಗಿ ನಿರಂಜನ ಮಠದ ಸ್ವಾಮೀಜಿ ಜೊತೆಗೆ ಭಕ್ತರ ಸಭೆ ಮಾಡಿದ್ದೇನೆ. ಕೂಡಲೇ ಈ ವಿಚಾರದಿಂದ ಸರ್ಕಾರ ಹಿಂದೆ ಸರಿಯಬೇಕು. ವಿವೇಕಾನಂದರು ಈ ದೇಶಕ್ಕೆ ಅನೇಕ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವರ ಸ್ಮಾರಕಕ್ಕೆ ಬೇರೆ ಜಾಗದ ವ್ಯವಸ್ಥೆ ಮಾಡಲಿ ಎಂದಿದ್ದಾರೆ.
ಸರ್ಕಾರ ಹಿಂದೂ ಧರ್ಮಕ್ಕೆ ಅನ್ಯಾಯ ಮಾಡಿದೆ.
ಇದೀಗ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ದೇವಸ್ಥಾನಗಳನ್ನು ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ನೆಲಸಮಗೊಳಿಸಲು ಹೊರಟಿದೆ. ನ್ಯಾಯಾಲಯದ ಆದೇಶ, ದೇವಸ್ಥಾನದ ಬಗ್ಗೆ ಅಗತ್ಯ ಅಧ್ಯಯನ, ಭಕ್ತರ ಭಾವನೆ ಮತ್ತಿತರ ಅಂಶಗಳನ್ನು ಪರಿಗಣಿಸದೇ ನೆಲಸಮಗೊಳಿಸುತ್ತಿರುವುದು ಇಡೀ ಸಮಾಜದ ಜನರಿಗೆ ನೋವುಂಟು ಮಾಡಿದೆ.
ಬಿಜೆಪಿ ಸರ್ಕಾರದಲ್ಲಿ ಹಿಂದೂ ಧರ್ಮದ ಮತ್ತು ವೀರಶೈವ-ಲಿಂಗಾಯತ ಸಮಾಜದ ದೇವಾಲಯಗಳಿಗೆ ರಕ್ಷಣೆ ಇಲ್ಲದಾಗಿದೆ. ಸಮಾಜದ ಜನಪ್ರತಿನಿಧಿಗಳು ಕೂಡ ಗಮನಹರಿಸದಿರುವುದು ಸರಿಯಲ್ಲ. ಈಗಿನ ಸಿಎಂ ಬೊಮ್ಮಾಯಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ನಾವು ನಮ್ಮ ಮುಂದಿನ ನಡೆಯನ್ನು ಸಮಾಜದ ಸ್ವಾಮೀಜಿಗಳ ಜೊತೆ ಚರ್ಚಿಸಿ ಸ್ಪಷ್ಟಪಡಿಸುತ್ತೇವೆ. ಇದೇ ವೇಳೆ ಸರ್ಕಾರ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಸಿದರು.
ಸರ್ಕಾರದ ಈ ನಡೆ ಹುತ್ತಿನೊಳಗೆ ಕೈ ಹಾಕಿದಂತಾಗಿದೆ. ರಾಷ್ಟ್ರೀಯ ಹೆದ್ದಾರಿ-4 ರ ಮಧ್ಯದಲ್ಲಿ ಬಂಕಾಪೂರ ಬಳಿ ಅನ್ಯ ಧರ್ಮದ ಪ್ರಾರ್ಥನಾ ಮಂದಿರ ಇದೆ. ತಮ್ಮ ಕ್ಷೇತ್ರದಲ್ಲಿಯೇ ಇರುವ ಈ ಪ್ರಾರ್ಥನಾ ಮಂದಿರವನ್ನು ತಾಕತ್ತಿದ್ದರೆ ತೆರವುಗೊಳಿಸಲಿ ಎಂದು ಸಿಎಂ ಬೊಮ್ಮಾಯಿಗೆ ಸ್ವಾಮೀಜಿ ಸವಾಲು ಹಾಕಿದರು.
ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ವಿಚಾರದಲ್ಲಿ ಕೂಡಲ ಸಂಗಮದ
ಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಒಂದು ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಸಿಗಬೇಕು ಎಂಬುದು ಅವರ ಆಶಯ. ನಾನೂ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಸೇರಿದವರೆಲ್ಲರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂದು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಸೇರಿ ಕೆಲಸ ಮಾಡುತ್ತೇನೆ.
Kshetra Samachara
18/09/2021 05:09 pm