ಹುಬ್ಬಳ್ಳಿ: ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳಿಲ್ಲಿದೇ ಅನಾಥವಾಗಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಅತ್ತ ಬಿಜೆಪಿ ಪಾಳಯದಲ್ಲಿ ಚುನಾವಣೆಯ ಟಿಕೆಟ್ ಗಾಗಿ ಪೈಪೋಟಿ ಹೆಚ್ಚಾಗಿದ್ದರೆ ಇತ್ತ ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ಮಾಡಬೇಕಾದ ಕೈ ನಾಯಕರಲ್ಲೇ ಒಳಜಗಳ ಆರಂಭವಾಗಿದ್ದು, ಸದ್ಯ ಕೈ ಪಾಳಯ ಡೋಲಾಯಮಾನ ಸ್ಥಿತಿಯಲ್ಲಿದೆ.
ಹೌದು.. ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿ ಮತದಾನ ದಿನಾಂಕ ಸನ್ನಿಹಿತವಾಗಿದೆ. ಹೀಗಾಗಿ ಅತ್ತ ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಸಾಕಷ್ಟು ಪೈಪೋಟಿ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್‍ನಲ್ಲಿ ಟಿಕೆಟ್ ನೀಡುವವರ ಮಧ್ಯೆಯೇ ಕಿತ್ತಾಟ ನಡೆಯುತ್ತಿದೆ.
ಅಷ್ಟಕ್ಕೂ ಅಭ್ಯರ್ಥಿಗಳನ್ನು ಕೈ ಪಾಳೆಯದಲ್ಲಿ ಆಯ್ಕೆ ಮಾಡುವವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಏಕೆಂದರೆ ಜಿಲ್ಲೆಯಲ್ಲಿ ಎಲ್ಲರೂ ಮುಖಂಡರೇ ಎನ್ನುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸನ್ನು ಮುನ್ನಡೆಸುವ ನಾಯಕರ ಕೊರತೆ ಕಾಡುತ್ತಿದೆ. ಈ ಹಿಂದೆ ನಡೆದ ಪಾಲಿಕೆ ಚುನಾವಣೆಯಲ್ಲಿ ಎಸ್.ಆರ್. ಮೋರೆ, ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ವಿನಯ ಕುಲಕರ್ಣಿ, ಎ.ಎಂ. ಹಿಂಡಸಗೇರಿ ಸೇರಿದಂತೆ ಅನೇಕ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಚರ್ಚಿಸುತ್ತಿದ್ದರು. ಬಹುಶಃ ಇವರು ಆಯ್ಕೆ ಮಾಡುವ ಅಭ್ಯರ್ಥಿಗಳೇ ಇಲ್ಲಿ ಫೈನಲ್ ಆಗುತ್ತಿದ್ದರು. ಈ ಬಗ್ಗೆ ಯಾರೂ ಆಪಸ್ವರವೆತ್ತುತ್ತಿರಲಿಲ್ಲ. ಆದರೀಗ ಬದಲಾದ ವಿದ್ಯಮಾನದಲ್ಲಿ ಸ್ಥಿತಿ ಡೋಲಾಯಮಾನವಾಗಿದೆ.
ಅಲ್ಲಲ್ಲೇ ನಾಯಕರುಗಳು ಹುಟ್ಟಿಕೊಂಡಿದ್ದು, ತಾವು ಹೇಳಿದವರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುನ್ನಡೆಸುವ ಸಮರ್ಥ ನಾಯಕರು ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದಾರೆ. ಹೀಗಾಗಿಯೇ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಧ್ರುವ ನಾರಾಯಣ, ತನ್ವೀರ ಸೇಟ್ ಅವರಿಗೆ ಚುನಾವಣೆ ಉಸ್ತುವಾರಿ ಜೊತೆಗೆ ಟಿಕೆಟ್ ಹಂಚಿಕೆಯನ್ನೂ ಸುಸೂತ್ರವಾಗಿ ನಿಭಾಯಿಸುವಂತೆ ಕೈ ಪಕ್ಷದ ವರಿಷ್ಠರು ಹೊರ ಜಿಲ್ಲೆಯ ನಾಯಕರಿಗೆ ಮಣೆ ಹಾಕಿರೋದ್ರಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.
Kshetra Samachara
19/08/2021 03:50 pm