ಧಾರವಾಡ: ಸೆ.3 ರಂದು ನಡೆಯಲಿರುವ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆಂದು ಕೇವಲ 3 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿಗಳನ್ನೇ ಅನುಸರಿಸಿ ಅಭ್ಯರ್ಥಿಗಳು ಪ್ರಚಾರ ನಡೆಸಬೇಕು. ಪ್ರಚಾರಕ್ಕೆ ಕೇವಲ 100 ಜನರನ್ನು ಮಾತ್ರ ಬಳಸಿಕೊಳ್ಳಬೇಕು. ಅದಕ್ಕಿಂತ ಹೆಚ್ಚಿನ ಜನರನ್ನು ಬಳಸಿಕೊಂಡರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಾಳೆ ಚುನಾವಣಾ ಅಧಿಸೂಚನೆ ಹೊರಡಿಸುತ್ತೇವೆ. ನಾಳೆಯಿಂದಲೇ ಪಾಲಿಕೆ ವ್ಯಾಪ್ತಿಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆಗಸ್ಟ್ 23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆ.24ಕ್ಕೆ ನಾಮಪತ್ರ ಪರಿಶೀಲನೆ, ಆ.26ಕ್ಕೆ ನಾಮಪತ್ರ ವಾಪಸ್ ಪಡೆಯಬಹುದು. ಸೆ.3ಕ್ಕೆ ಇವಿಎಂ ಮಶಿನ್ ಮೂಲಕ ಮತದಾನ ನಡೆಯಲಿದೆ. ಸೆ.5ಕ್ಕೆ ಮರು ಮತದಾನ ಅವಶ್ಯಕತೆ ಇದ್ದಲ್ಲಿ ನಡೆಸಲಾಗುವುದು. ಸೆ.6ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.
ಹುಬ್ಬಳ್ಳಿ, ಧಾರವಾಡದ 82 ವಾರ್ಡ್‌ಗಳಿಗೆ ಈ ಚುನಾವಣೆ ನಡೆಯಲಿದೆ. 837 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 407954 ಲಕ್ಷ ಮಹಿಳಾ ಮತದಾರರು, 403497 ಲಕ್ಷ ಪುರುಷ ಹಾಗೂ ಹಾಗೂ ಇತರೆ 86 ಮತದಾರರು ಸೇರಿದಂತೆ ಒಟ್ಟು 811537 ಲಕ್ಷ ಮತದಾರರಿದ್ದಾರೆ. 16 ಚುನಾವಣಾ ಅಧಿಕಾರಿಗಳ ಜೊತೆಗೆ 16 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಾಳೆಯಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
Kshetra Samachara
15/08/2021 02:16 pm