ಧಾರವಾಡ: ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹುಬ್ಬಳ್ಳಿ, ಧಾರವಾಡದ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಕಡಪಾ ಮೈದಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಶಿಕ್ಷಕರು, ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಿರುಕುಳ ನೀಡುವುದಲ್ಲದೇ, ದಮನಕಾರಿ ನೀತಿ ಹೇರುತ್ತಿದೆ. ಕೂಡಲೇ ಈ ಕಾರ್ಯ ನಿಲ್ಲಿಸಬೇಕು.
ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತಗೊಳಿಸಿ ಉಳಿದ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ಬಜೆಟ್ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ಕಡಿತದ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿರ್ಧರಿಸಬೇಕು. ಕೂಡಲೇ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿ ವರ್ಷ ಶಾಲಾ ನವೀಕರಣ ಮಾಡುವ ಆದೇಶ ಸರಿಯಾದ ಕ್ರಮವಲ್ಲ. ಈ ಹಿಂದಿದ್ದ 5, 15 ವರ್ಷ ಮತ್ತು ನಂತರ ಶಾಶ್ವತ ಅನುಮೋದನೆ ಎಂಬ ಆದೇಶವನ್ನು ಮರು ಆದೇಶ ಮಾಡಬೇಕು. ಮೂಲ ವೇತನಕ್ಕೆ ಸಂಬಂಧಿಸಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ, ಪಡೆಯುವ ಶುಲ್ಕ, ಶಿಕ್ಷಕರ ಸಂಖ್ಯೆಯ ಅನುಪಾತದಲ್ಲಿ ವೇತನ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಖಾಸಗಿ, ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಸಮನಾಗಿ ನೋಡಿದಾಗಲೇ ಶಿಕ್ಷಣದಲ್ಲಿ ಹೊಸತನ ಬರಲು ಸಾಧ್ಯ. ಹೀಗಾಗಿ ಸರ್ಕಾರ ಶಿಕ್ಷಣದ ವಿಷಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಅವೈಜ್ಞಾನಿಕ ಆದೇಶ ಮುಂದುವರೆದರೆ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಯಿತು.
Kshetra Samachara
23/02/2021 07:35 pm