ನವಲಗುಂದ : ನವಲಗುಂದ ಮತಕ್ಷೇತ್ರದ ರೈತ ಮುಖಂಡರು ಹಾಗೂ ಕಳಸಾ-ಬಂಡೂರಿ ಹೋರಾಟ ಸಮಿತಿಯ ವತಿಯಿಂದ ಕಳಸಾ-ಬಂಡೂರಿ ನೀರು ಪಡೆಯಲು ಸರಕಾರ ಆದಷ್ಟು ಬೇಗ ಕ್ರಮ ಕೈಗೊಂಡು, ಶೀಘ್ರವಾಗಿ ಕಾಮಗಾರಿಯನ್ನ ಮುಗಿಸಿ ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬೆಂಗಳೂರಿನಲ್ಲಿ ಮನವಿ ನೀಡಲಾಯಿತು.
ಇನ್ನು ಇದೆ ವೇಳೆ ನವಲಗುಂದ ಮತಕ್ಷೇತ್ರದಲ್ಲಿ ವಿವಿಧ ನೀರಾವರಿ ಯೋಜನೆಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ನಂತರ ಮನವಿಗೆ ಸ್ಪಂದಿಸಿದ ಸಚಿವ ರಮೇಶ ಜಾರಕಿಹೊಳಿ, ಕಳಸಾ-ಬಂಡೂರಿ ನೀರಿನ ಯೋಜನೆಯ ಅನುಷ್ಠಾನ ಸರಕಾರದ ಮೊದಲ ಆದ್ಯತೆಯ ಯೋಜನೆಯಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು. ಮತ್ತು ರಾಜ್ಯದ ಪಾಲಿನ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳುವುದು ನಮ್ಮ ಹಕ್ಕಾಗಿದೆ ಎಂದ ಸಚಿವರು ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು, ಕೂಡಲೇ ಬೆಳೆವಿಮೆ ಮತ್ತು ಪರಿಹಾರ ಹಣವನ್ನ ಬಿಡುಗಡೆ ಮಾಡುವ ಕುರಿತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ,ಕಳಸಾ-ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದಪ್ಪ ದ್ಯಾಮಪ್ಪಯ್ಯ, ಹೋರಾಟ ಸಮಿತಿ ಸದಸ್ಯ ಮಲ್ಲಿಕಾರ್ಜುನಗೌಡ ಪಾಟೀಲ, ಭಗವಂತಪ್ಪ ಪುಟ್ಟಣ್ಣನವರ, ಸಂಜೀವ ನಿಡವಣಿ, ಸುಭಾಸಚಂದ್ರಗೌಡ ಪಾಟೀಲ, ರಘುನಾಥರೆಡ್ಡಿ ನಡುವಿನಮನಿ, ಗುರುನಾಥ ಪಲ್ಲೇದ, ಜಯರಾಜ ಪಾಟೀಲ, ರವಿಗೌಡ ಪಾಟೀಲ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
Kshetra Samachara
03/02/2021 05:48 pm