ಹುಬ್ಬಳ್ಳಿ: ರಾಜ್ಯದಲ್ಲಿ ಧರ್ಮ ಯುದ್ಧ ಜೋರಾಗಿಯೇ ನಡೆಯುತ್ತಿದೆ. ಒಂದಲ್ಲಾ ಒಂದು ವಿವಾದದ ಮೂಲಕವೇ ಧರ್ಮದ ದಂಗಲ್ ಜೋರಾಗಿದ್ದು, ಇದೀಗ ಹುಡಾ ಅಧ್ಯಕ್ಷರ ಒಂದು ಲೆಟರ್ ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದಿದೆ. ಏನದು ವಿವಾದ ಅಂತೀರಾ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.....
ಹಿಜಾಬ್, ಹಲಾಲ್, ಮೈಕ್ ವಿವಾದದ ಬೆನ್ನಲ್ಲೇ ಇದೀಗ ಹೊಸ ವಿವಾದಕ್ಕೆ ವಾಣಿಜ್ಯನಗರಿ ಸಾಕ್ಷಿಯಾಗಿದೆ. ಹೌದು ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಆರೋಪ ಪ್ರಕರಣ ಇದೀಗ ಮತ್ತೊಂದು ವಿವಾದ ಸೃಷ್ಟಿಗೆ ಕಾರಣವಾಗಿದ್ದು, ಖುದ್ದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರಗಿ ಬರೆದ ಪತ್ರ ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅವಳಿ ನಗರದ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಮೊನ್ನೆ ನಡೆದ ಹಿಂದೂ-ಮುಸ್ಲಿಂ ಯುವಕ ಯುವತಿಯ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬವನ್ನು ಬಹಿಷ್ಕಾರ ಮಾಡುವಂತೆ ಪತ್ರ ಬರೆದಿದ್ದಾರೆ. ಖುದ್ದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಲೆಟರ್ ಪ್ಯಾಡ್ ನಲ್ಲಿ ಮುಂದಿನ ದಿನಗಳಲ್ಲಿ ಯಾರೇ ಎಸ್.ಎಸ್.ಕೆ ಸಮಾಜದ ಹೆಣ್ಣು ಮಕ್ಕಳು ಮುಸ್ಲಿಂ ಸಮಾಜದ ಯುವಕರನ್ನು ಮದುವೆಯಾದರೇ ಅವರ ಕುಟುಂಬವನ್ನು ಸಮಾಜದಿಂದ ಬಹಿಷ್ಕಾರ ಮಾಡಬೇಕು ಎನ್ನುವ ಹೊಸ ವಿವಾದವನ್ನು ಹುಟ್ಟುಹಾಕುವ ಜೊತೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಲೆಟರ್ ಪ್ಯಾಡ್ ದುರ್ಬಳಕೆ ಮಾಡಿಕೊಂಡಿದ್ದಾರೆ.
ಇನ್ನೂ ಮುಸ್ಲಿಂ ಸಮಾಜದ ಯುವಕರನ್ನು ಮದುವೆಯಾಗುವ ಎಸ್.ಎಸ್.ಕೆ ಸಮಾಜದ ಕುಟುಂಬವನ್ನು ಸಮಾಜದಿಂದ ಹೊರಗಿಡುವುದು ಆ ಕುಟುಂಬಕ್ಕೆ ಸಮಾಜದ ಯಾವುದೇ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು, ಆ ಕುಟುಂಬವನ್ನ ಯಾವುದೇ ಮನೆಯ ಕಾರ್ಯಕ್ರಮಕ್ಕೆ ಕರೆಯುವಂತಿಲ್ಲ, ಭಾಗವಹಿಸುವಂತಿಲ್ಲ. ಹೀಗೆ ನಾಲ್ಕೈದು ವಿಷಯಗಳನ್ನು ಪತ್ರದ ಮುಖೇನ ಉಲ್ಲೇಖ ಮಾಡುವ ಮೂಲಕ ಹೊಸ ವಿವಾದಕ್ಕೆ ನಾಗೇಶ್ ಕಲಬುರಗಿ ಕಾರಣರಾಗಿದ್ದಾರೆ. ಅಲ್ಲದೆ ಈ ವಿವಾದ ದೊಡ್ಡ ಮಟ್ಟಕ್ಕೆ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಕಾಂಗ್ರೆಸ್ ಕೆಲ ಯುವ ನಾಯಕರು ಸಹ ನಾಗೇಶ್ ಕಲಬುರಗಿ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇನ್ನೂ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್.ಎಸ್. ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ನಾಗೇಶ್ ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ನಮ್ಮಲ್ಲಿ 50ಕ್ಕೂ ಹೆಚ್ಚು ಟ್ರಸ್ಟಿಗಳಿದ್ದು, ಎಲ್ಲರೂ ಸೇರಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದಿದ್ದಾರೆ.
ಒಟ್ಟಾರೆ ರಾಜ್ಯದಲ್ಲೆಡೆ ಇದೀಗ ಧರ್ಮ ದಂಗಲ್ ಜೋರಾಗಿದ್ದು, ಇದರ ಮಧ್ಯೆಯೇ ಇದೀಗ ಬಹಿಷ್ಕಾರದ ಪತ್ರದ ಹೊಸ ಸ್ವರೂಪ ಪಡೆದುಕೊಂಡಿದ್ದು, ಇಂತಹ ವಿಚಾರಗಳು ಸಮಾಜವನ್ನು ಮತ್ತೆ ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
Kshetra Samachara
09/04/2022 07:41 pm