ಧಾರವಾಡ: ಹಿಂದೂ ಸಂಘಟನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರಸ್ವಾಮಿ ಅವರೇ ನಿಮಗೆ ತಾಕತ್ ಇದ್ದರೆ ಎದುರಾ ಬದುರಾ ಬನ್ನಿ ನಾವು ಏನು ಮಾಡಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಮುತಾಲಿಕ್, ಕುಮಾರಸ್ವಾಮಿ ಅವರೇ ನೀವು ರಾಜಕೀಯವಾಗಿ ಏನಾದರೂ ಮಾಡಿಕೊಳ್ಳಿ ಆದರೆ, ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡುವ ನೀವು ಎಸ್‌ಡಿಪಿಐ, ಪಿಎಫ್‌ಐ ಬಗ್ಗೆ ಮಾತನಾಡಿದ್ದೀರಾ? ವೋಟ್ ಬ್ಯಾಂಕ್ ರಾಜಕಾರಣ ನೀವು ಮಾಡುತ್ತಿದ್ದೀರಿ. ಹಿಂದೂ ಸಂಘಟನೆಗಳನ್ನು ಬೈದರೆ ಮುಸ್ಲಿಂ ವೋಟ್ ಬರುತ್ತವೆ ಎಂಬ ಭ್ರಮೆಯಲ್ಲಿದ್ದೀರಿ. ದೇಶಭಕ್ತಿ ಕೆಲಸ ಮಾಡುವವರನ್ನು ನೀವು ಕೆಣಕಬೇಡಿ ಎಂದಿದ್ದಾರೆ.
ಹಿಂದೂ ಸಂಘಟನೆಗಳು ತಪ್ಪು ಇವೆ ಎನ್ನುವುದಾದರೆ ಎದುರಿಗೆ ಬನ್ನಿ. ನಾವು ಏನು ಮಾಡಿದ್ದೇವೆ ಅನ್ನೋದನ್ನ ಹೇಳುತ್ತೇವೆ. ಕುಮಾರಸ್ವಾಮಿ ಅವರೇ ನೀವು ಭ್ರಷ್ಟರಿದ್ದೀರಿ. ನಾವು ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಹಿಂದೂ ಸಂಘಟನೆಗಳು ರಾವಣ ಸೇನೆ ಎಂಬ ನಿಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿ ಅವರೇ ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಿ ಬರುತ್ತೇನೆ ಎಂದಿದ್ದಾರೆ. ಹಿಂದೂ ಸಮಾಜ ಅವರಿಗೆ ಏನು ತೊಂದರೆ ಕೊಟ್ಟಿದೆ? ಮೊದಲು ನಿಮ್ಮ ತಂದೆಗೆ ಬುದ್ಧಿವಾದ ಹೇಳಿ. ರಾಜಕೀಯವಾಗಿ ನೀವು ಬೇಕಾದ್ದನ್ನು ಮಾತನಾಡಿಕೊಳ್ಳಿ ಆದರೆ, ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡಿದ್ದು ಅಕ್ಷಮ್ಯ ಅಪರಾಧ ಎಂದರು.
ಮಸೀದಿಗಳಲ್ಲಿ ಹಾಕಲಾಗಿರುವ ಮೈಕ್ ಸಂಬಂಧ ಕಳೆದ ಆರು ತಿಂಗಳ ಹಿಂದೆ ತಹಶೀಲ್ದಾರರಿಗೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದೆವು. ಆ ಬಗ್ಗೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂಬುದರ ಬಗ್ಗೆ ವಿಚಾರಣೆ ಮಾಡಲು ಇಂದು ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿದ್ದೆವು. ಆದರೆ, ಅಲ್ಲಿನ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ಈ ಕಚೇರಿಗೆ ಬೀಗ ಹಾಕಬೇಕಿದೆ ಎಂದು ಇದೇ ಸಂದರ್ಭದಲ್ಲಿ ಅವರು ಕಿಡಿ ಕಾರಿದರು.
ಈ ಸಂಬಂಧ ನಾವು ಮತ್ತೆ ಏ.13 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ರೂ ಕಸಾಯಿ ಖಾನೆ ಇನ್ನೂ ಇವೆ. ಇನ್ನೂ ದನಗಳನ್ನು ಕಡಿಯುತ್ತಿದ್ದಾರೆ ಎಂದರು.
ಎಸಿ ಕಚೇರಿಯಲ್ಲಿ ಅಧಿಕಾರಿಗಳು ಮಜಾ ಉಡಾಯಿಸುತ್ತಿದ್ದಾರೆ. ಶಬ್ದ ಮಾಲಿನ್ಯ ಇವರ ಗಮನಕ್ಕೆ ಬಂದೇ ಇಲ್ವಾ? ರಾಜ್ಯದಲ್ಲಿರುವುದು ಬೇಜವಾಬ್ದಾರಿ ಸರ್ಕಾರ. ಈ ಸರ್ಕಾರ ಡೀಲಾ ಆಗಿದೆ. ರಾಜಕೀಯ ಪಕ್ಷಗಳು ವೋಟಿನ ಆಸೆಗೆ ಜೊಲ್ಲು ಸುರಿಸುತ್ತಿವೆ. ಈ ಕಾನೂನು ಒಬ್ಬರಿಗೆ ಮಾತ್ರ ಅನ್ವಯವಾಗುವುದಿಲ್ಲ. ಎಲ್ಲರೂ ಕಾನೂನು ಪಾಲಿಸಬೇಕು. ಚರ್ಚ್, ಮಸೀದಿಯಲ್ಲಿ ಶಬ್ದ ನಿಲ್ಲಿಸಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/04/2022 08:39 pm