ಹುಬ್ಬಳ್ಳಿ: ಕಳೆದ ಐದಾರು ದಿನಗಳಿಂದ ಹುಬ್ಬಳ್ಳಿಯ ರಾಜನಗರದ ನೃಪತುಂಗ ಬೆಟ್ಟದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ. ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಬಗ್ಗೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಸಲಹೆ ಪಡೆದಿದ್ದೇವೆ. ಕಾರ್ಯಾಚರಣೆ ವೇಳೆ ಕೇಂದ ವಿದ್ಯಾಲಯದ ಆವರಣದಲ್ಲಿನ ಹಳೇಯ ಕಟ್ಟಡ ಕೆಡುವುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಡಿ.ಎಫ್.ಒ ಯಶಪಾಲ ಕ್ಷೀರಸಾಗರ ಹೇಳಿದರು.
ಸಭೆಯ ಬಳಿಕ ಜಂಟಿಯಾಗಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿರತೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ಮಾಡಲಾಗುವುದು. ಸ್ಥಳೀಯರು ಸಂಜೆ ಹಾಗೂ ರಾತ್ರಿ ವೇಳೆ ಏಕಾಂಗಿಯಾಗಿ ಓಡಾಡಬಾರದು ಎಂದು ಸಲಹೆ ನೀಡಿದರು.
ಕಾರ್ಯಾಚರಣೆ ಅರಣ್ಯ ಇಲಾಖೆಯವರು ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಅರಣ್ಯ ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈಗಾಗಲೇ ಕೇಂದ್ರೀಯ ವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಚಿರತೆ ಕಾಣಿಸಿಕೊಂಡ ಪ್ರದೇಶಗಳಲ್ಲಿ ಹೆಚ್ಚಿನ ಗಸ್ತು ಮಾಡಲಾಗುವುದು. ಹೆಚ್ಚಿನ ಸಿಬ್ಬಂದಿಗಳ ಅಗತ್ಯ ಬಿದ್ದರೆ ಬೇರೆ ಸ್ಥಳಗಳಿಂದಲೂ ಸಿಬ್ಬಂದಿಗಳನ್ನು ಆಯೋಜನೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಇನ್ನೂ ಕಾರ್ಯಾಚರಣೆಗೆ ಡ್ರೋಣ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ. ಮೂರು ಟ್ರ್ಯಾಪ್ ಗಳನ್ನ ಬಳಸಲಾಗುತ್ತಿದೆ. ಸದ್ಯ ಕಾರ್ಯಾಚರಣೆಗೆ ಅರಣ್ಯ ಇಲಾಖೆಯಿಂದ 40 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಬೀದಿ ನಾಯಿ ಹಾಗೂ ಹಂದಿಗಳನ್ನು ಸಹ ಸ್ಥಳಾಂತರ ಮಾಡಲಾಗುವುದು ಎಂದು ಅವರು ಹೇಳಿದರು.
Kshetra Samachara
21/09/2021 03:38 pm