ಧಾರವಾಡ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಹುಬ್ಬಳ್ಳಿಯ ಜಿಮ್ಖಾನಾ ಮೈದಾನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಮೇಲೆ ಭೂಗಳ್ಳರು ಎಂಬ ಆರೋಪ ಮಾಡಿದ್ದರು.
ಈ ಮೈದಾನವನ್ನು ಜೋಶಿ ಹಾಗೂ ಶೆಟ್ಟರ್ ಕಬಳಿಸಿದ್ದಾರೆ ಎಂಬ ಆರೋಪ ಹಿರೇಮಠ ಅವರದ್ದಾಗಿತ್ತು. ಹಿರೇಮಠ ಅವರ ಈ ಆರೋಪಕ್ಕೆ ಸಂಬಂಧಿಸಿದಂತೆ, ನಮ್ಮ ಮಾನ ಹಾನಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ನ್ಯಾಯಾಲಯದ ಮುಂದೆ ಹಾಜರಾದ ಹಿರೇಮಠ ಅವರು, ನಾನು ಯಾವುದೇ ಕಾರಣಕ್ಕೂ ಮಾನ ಹಾನಿ ಮಾಡಿಲ್ಲ. ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ಈ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯವರು ಹಿರೇಮಠ ಅವರ ಈ ಅರ್ಜಿಯನ್ನೇ ವಜಾಗೊಳಿಸಿರುವುದರಿಂದ ಹಿರೇಮಠ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಹಿರೇಮಠ ಅವರು ಭೂಗಳ್ಳ ಎಂಬ ಶಬ್ದ ಬಳಕೆ ಮಾಡಿದ್ದರಿಂದ ಜೋಶಿ ಅವರು ಖಾಸಗಿ ದೂರು ದಾಖಲಿಸಿದ್ದರು. ಜೋಶಿ ಅವರ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಮಠ ಜಾಮೀನು ಸಹ ಪಡೆದುಕೊಂಡಿದ್ದರು.
ಜಾಮೀನು ಪಡೆದ ಬಳಿಕ ಈ ಕೇಸ್‌ನ್ನು ವಜಾ ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡ ಬಳಿಕ ಈ ಪ್ರಕರಣ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಅಲ್ಲೂ ಸಹ ಹಿರೇಮಠ ಅವರು, ಈ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಇದೀಗ ಇಲ್ಲೂ ಅರ್ಜಿ ವಜಾಗೊಂಡಿದ್ದು, ಪ್ರಕರಣ ಮುಂದುವರೆಸಲು ನ್ಯಾಯಾಲಯ ನಿರ್ಧರಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/10/2022 04:59 pm