ಧಾರವಾಡ: ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಬಾರಿಯ ವಿಚಾರಣೆಯಲ್ಲಿ ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಸೋಮವಾರ ವಿಚಾರಣೆ ನಡೆಸಿ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ.
ಡಾ.ಲಿಂಗರಾಜ ಅಂಗಡಿ ಅವರು ಕಸಾಪ ನಿಯಮಾವಳಿ ಗಾಳಿಗೆ ತೂರಿ ಎರಡು ಬಾರಿ ಅಧ್ಯಕ್ಷರಾಗಿದ್ದಲ್ಲದೇ, ಮೂರನೇ ಅವಧಿಗೆ ಸ್ಪರ್ಧಿಸಿದ್ದಾರೆ. ಇದು ಕಸಾಪ ನಿಯಮಾವಳಿ ಉಲ್ಲಂಘನೆ ಆಗಿದೆ. ಇದಲ್ಲದೇ ಕಸಾಪ ನಿಯಮಾವಳಿ ಪ್ರಕಾರ ಉಪವಿಭಾಗಾಧಿಕಾರಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಗಳನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು ಎಂಬ ನಿಯಮವಿದೆ. ಆದರೆ ಕಸಾಪ ಧಾರವಾಡ ಜಿಲ್ಲೆಯ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅವರನ್ನು ನೇಮಿಸಿದೆ. ಇದು ಕೂಡ ಸರಿಯಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಕಸಾಪ ಮತ್ತು ಇತರೆ ಎದುರುದಾರರಿಗೆ ನೋಟಿಸ್ ಜಾರಿಗೊಳಿಸಿ ಚುನಾವಣೆಗೆ ತಡೆಯಾಜ್ಞೆ ನೀಡಿ ನ.15ಕ್ಕೆ ವಿಚಾರಣೆ ಮುಂದೂಡಿತ್ತು. ಅದರಂತೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದ ಎದುರು ಹಾಜರಾದ ಡಾ.ಲಿಂಗರಾಜ ಅಂಗಡಿ ಹಾಗೂ ಕಸಾಪ ಪರ ವಕೀಲರು, ಕಸಾಪ ನಿಯಮಾವಳಿ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಇವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ.
ಕೇಂದ್ರ ಸಾಹಿತ್ಯ ಪರಿಷತ್ತಿನ ಪರವಾಗಿ ಗುರುದೇವ ಗಚ್ಚಿನಮಠ, ಡಾ.ಲಿಂಗರಾಜ ಅಂಗಡಿ ಪರವಾಗಿ ಪ್ರಕಾಶ ಉಡಿಕೇರಿ ಹಾಗೂ ರಾಜಶೇಖರ ಅಂಗಡಿ ವಕಾಲತ್ತು ವಹಿಸಿದ್ದರು.
Kshetra Samachara
15/11/2021 03:32 pm