ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ, ರಾಜ್ಯದಲ್ಲಿ ಮತ್ತೊಂದು ವಿವಾದ ಹುಟ್ಟು ಹಾಕುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಒಂದು ಕಡೆ ಉತ್ಸವ ಸಮಿತಿ ಜೊತೆಗೆ ಸಂಘಟನೆಗಳು ಕೈ ಜೋಡಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುತ್ತಿವೆ. ಈ ಹೋರಾಟ ಹತ್ತಿಕ್ಕಲು ಪಾಲಿಕೆ ಮಾಸ್ಟರ್ ಸ್ಟ್ರೋಕ್ ನೀಡಿದ್ದು, ಇದಕ್ಕೆ ಸಂಘಟನಾಕಾರರು ಕೆಂಡಾಮಂಡಲರಾಗಿದ್ದಾರೆ.
ಹೌದು..ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಸಂಬಂಧ ಮತ್ತೊಂದು ಹೋರಾಟಕ್ಕೆ ಸಂಘಟನೆಗಳು ಸಜ್ಜಾಗುತ್ತಿವೆ. ಈ ಬಾರಿ ಹನ್ನೊಂದು ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮನವಿಯ ಬಗ್ಗೆ ಶೀಘ್ರವಾಗಿ ನಿರ್ಧಾರವನ್ನು ಪ್ರಕಟಿಸುವಂತೆ, ಚನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ, ಪಾಲಿಕೆಗೆ ಮತ್ತು ಸರ್ಕಾರಕ್ಕೆ ಗಡುವು ನೀಡಿದೆ. ಆದ್ರೆ ಪಾಲಿಕೆ ಇವರಿಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಸಮಿತಿ ತನ್ನ ಹೋರಾಟದ ಹಾದಿ ಬದಲಿಸಿದೆ. ಹುಬ್ಬಳ್ಳಿಯ ಚನ್ನಮ್ಮ ಗಜಾನನ ಉತ್ಸವ ಸಮಿತಿ ಸೇರಿದಂತೆ, ಶ್ರೀರಾಮಸೇನೆ, ಮರಾಠ ಸಂಘಟನೆ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಲಿದೆ. ದುರ್ಗಬೈಲ್‌ನಿಂದ ಪಾಲಿಕೆವರೆಗೆ ಪ್ರತಿಭಟನಾ ರ‌್ಯಾಲಿ ಮಾರ್ಗದ ಮಧ್ಯೆ ಸಾರ್ವಜನಿಕರ ಸಹಿ ಸಂಗ್ರಹ ಮಾಡುವ ಸಮಿತಿ ಸದಸ್ಯರು ಬಳಿಕ ಪಾಲಿಕೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಪಾಲಿಕೆ ಮುಂದೆ ಭಜನೆ, ಕೀರ್ತನೆ, ಭಕ್ತಿ ಗೀತೆ ಹಾಡಿ ಪ್ರತಿಭಟನೆ ನಡೆಸುವ ಬಗ್ಗೆ ಸಮಿತಿ ನಿರ್ಧಾರ ಮಾಡಿದೆ..
ಅತ್ತ ಪಾಲಿಕೆ ಸಮಿತಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಕಾದು ನೋಡೋ ತಂತ್ರ ಅನುಸರಿಸಿರುವ ಪಾಲಿಕೆ ಪೂರ್ವಾನುಮತಿ ಕಾರ್ಡ್ ಪ್ಲೆ ಮಾಡಿದೆ. ಈ ಕುರಿತು ಸಮಿತಿಗೆ ಪಾಲಿಕೆ ಸಹಾಯಕ ಆಯುಕ್ತರು ಪತ್ರ ಬರೆದಿದ್ದು, ಈದ್ಗಾ ಮೈದಾನಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಪೂರ್ವಾನುಮತಿ ಪತ್ರವನ್ನು, ಪಾಲಿಕೆಗೆ ಹಾಜರುಪಡಿಸಿದ ನಂತರ ತೀರ್ಮಾನ ನೀಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆಂದು ಪತ್ರದಲ್ಲಿ ತಿಳಿಸಲಾಗಿದೆ..
ಈದ್ಗಾ ಮೈದಾನ ರಕ್ತಸಿಕ್ತ ಇತಿಹಾಸದ ಕರಿಛಾಯೆಯನ್ನು ಹೊಂದಿ, ಅದರಿಂದ ನಿಧಾನವಾಗಿ ಹೊರ ಬರುತ್ತಿದೆ. ಆದ್ರೆ ಈಗ ಈ ಗಜಾನನ ಪ್ರತಿಷ್ಠಾಪನೆ ವಿಚಾರ ಮೈದಾನಕ್ಕೆ ಮತ್ಯಾವ ಸಂಕಷ್ಟವನ್ನು ಹುಟ್ಟು ಹಾಕಲಿದೆ ಅಂತ ಹುಬ್ಬಳ್ಳಿ ಜನ ಆಂತಕದಲ್ಲಿ ಪಾಲಿಕೆಯ ಕಡೆ ಎದುರು ನೋಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/08/2022 04:53 pm