ಧಾರವಾಡ: ಕೇಂದ್ರ ಬಿಜೆಪಿ ಸರ್ಕಾರ ಸಂಪ್ರದಾಯಬದ್ಧವಾದ ಖಾದಿ ರಾಷ್ಟ್ರಧ್ವಜದ ಬದಲಿಗೆ ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜ ಮಾರಾಟಕ್ಕೆ ಅನುಮತಿ ನೀಡಿದ್ದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಸರ್ಕಾರ ಕೋಟಿಗಟ್ಟಲೇ ಧ್ವಜ ಹಾರಿಸುವ ಅಭಿಯಾನ ಆರಂಭ ಮಾಡಿದೆ. ಆದರೆ, ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಖಾದಿ ಬಟ್ಟೆ ಬಿಟ್ಟು ಪಾಲಿಸ್ಟರ್ ಬಟ್ಟೆಯ ಧ್ವಜ ಮಾರಾಟಕ್ಕೆ ಅನುಮತಿ ಕೊಟ್ಟಿದೆ. ಇಂದು ಮಾರುಕಟ್ಟೆಯಲ್ಲಿ ಹರಿದ ಪಾಲಿಸ್ಟರ್ ಬಟ್ಟೆಯ ಧ್ವಜಗಳು ಮಾರಾಟವಾಗುತ್ತಿವೆ. ಹರಿದ ಧ್ವಜಗಳನ್ನು ಹಾರಿಸಬೇಕಾ? ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ವಾ? ಈ ಪಾಲಿಸ್ಟರ್ ಧ್ವಜಗಳಿಗೆ ಅಳತೆಗಳೇ ಇಲ್ಲ. ಅಶೋಕ ಚಕ್ರ ವಕ್ರವಾಗಿದೆ. ಮೊಟ್ಟೆಯಾಕಾರದಲ್ಲಿ ಅಶೋಕ ಚಕ್ರ ಹಾಕಲಾಗಿದೆ. ರಾಷ್ಟ್ರಧ್ವಜಕ್ಕೆ ಮರ್ಯಾದೆ ಇಲ್ವಾ? ಬಿಜೆಪಿಯವರೇ ಇದನ್ನು ಗಮನಿಸಿ ಎಂದು ವಾಗ್ದಾಳಿ ನಡೆಸಿದರು.
ಖಾದಿ ಭಂಡಾರದಲ್ಲಿ ಅಳತೆ ಪ್ರಕಾರವೇ ಇರುವ ಧ್ವಜಗಳನ್ನು ಮಾರಾಟ ಮಾಡುತ್ತಾರೆ. ಖಾದಿ ಬಟ್ಟೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ನಾವೂ ಕೂಡ ಅಮೃತ ಮಹೋತ್ಸವದ ಅಂಗವಾಗಿ ಸಾವಿರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುತ್ತೇವೆ. ಆದರೆ, ನಾವು ಖಾದಿ ಬಟ್ಟೆಯ ಧ್ವಜಗಳನ್ನೇ ಹಾರಿಸುತ್ತೇವೆ. ಪಾಲಿಸ್ಟರ್ ಬಟ್ಟೆಯ ಧ್ವಜ ಬಿಟ್ಟು ಖಾದಿ ಬಟ್ಟೆಯ ರಾಷ್ಟ್ರಧ್ವಜಕ್ಕೆ ಸರ್ಕಾರ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/08/2022 02:40 pm