ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಶ್ರೀ ಗಣೇಶೋತ್ಸವಕ್ಕೆ ಪಟ್ಟು; ಸೌಹಾರ್ದತೆಯಿಂದ ಬಗೆಹರಿಯಲಿ ಬಿಕ್ಕಟ್ಟು

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಅದು ಈ ಹಿಂದೆ ವಿವಾದದ ಕಿಡಿ ಹೊತ್ತಿಸಿದ್ದ ಮೈದಾನ. ಆ ವಿವಾದ ತಣ್ಣಗಾಗಿ ದಶಕಗಳೇ ಕಳೆದಿದ್ರೂ ಇದೀಗ ಮತ್ತೊಂದು ವಿಚಾರದಲ್ಲಿ ಆ ಕಿಡಿ ಮತ್ತೆ ಹೊತ್ತಿ ಕೊಳ್ಳೋ‌ ಲಕ್ಷಣ ಗೋಚರಿಸುತ್ತಿವೆ. ಗಣೇಶೋತ್ಸವ ಆಚರಣೆ ವಿಚಾರದಲ್ಲಿ ಹುಬ್ಬಳ್ಳಿಯಲ್ಲಿ ಮತ್ತೆ ಈದ್ಗಾ ವಿವಾದ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದ್ದು, ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಮೂರು ದಿನಗಳ‌ ಗಡುವು ನೀಡಿವೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಈಗ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಕಳೆದೊಂದು ವಾರದಿಂದ ಹುಬ್ಬಳ್ಳಿಯ ಹಲವು ಹಿಂದೂ ಪರ ಸಂಘಟನೆಗಳು ಹೋರಾಟ ಮಾಡ್ತಿವೆ. ಹುಬ್ಬಳ್ಳಿಯ ಈದ್ಗಾ ಮೈದಾನ ಗಜಾನನೋತ್ಸವ ಸಮಿತಿ ಕಾರ್ಯಕರ್ತರು ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ‌ ಕಾರ್ಯಕರ್ತರು ಇದೀಗ 2ನೇ ಹಂತದ ಹೋರಾಟ ಆರಂಭಿಸಿದ್ದಾರೆ.

ಬೆಂಗಳೂರಿನ‌ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ವಿಚಾರದಲ್ಲಿ ನಡೆಯುತ್ತಿರೋ ವಿವಾದದ ಬೆನ್ನಲ್ಲೇ ಇದೀಗ ಹುಬ್ಬಳ್ಳಿಗೂ ಈ ವಿವಾದ ವ್ಯಾಪಿಸಿದ್ದು, ಈ ಬಗ್ಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮೊನ್ನೆಯಷ್ಟೇ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರು.‌

ಪ್ರಮುಖವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರಿಗೆ ವರ್ಷಕ್ಕೆ ಎರಡು ಬಾರಿಯಂತೆ ಪ್ರಾರ್ಥನೆ ಹಾಗೂ ವರ್ಷದಲ್ಲಿ ಎರಡು ಬಾರಿ ಧ್ವಜಾರೋಹಣಕ್ಕೆ ಈ ಹಿಂದೆಯೇ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದ್ರೆ, ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಾಗಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹಿಂದುಗಳಿಗೂ ಸಹ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳ‌ ಕಾರ್ಯಕರ್ತರು ಪಾಲಿಕೆ ಕಚೇರಿ ಮುಂದೆ ಅದೆಷ್ಟೋ ಪ್ರತಿಭಟನೆ ಮಾಡಿ ಮನವಿ ಮಾಡಿದ್ದಾರೆ. ಇನ್ನು, ಪಾಲಿಕೆ ಆಯುಕ್ತರು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ.

ಒಟ್ಟಿನಲ್ಲಿ ಶಾಂತವಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಮತ್ತೆ ಗಣೇಶೋತ್ಸವ ಆಚರಣೆಗೆ ಅನುಮತಿ ‌ನೀಡೋ ವಿಚಾರದಲ್ಲಿ ಮುನ್ನೆಲೆಗೆ ಬಂದಿದ್ದು, ಭುಗಿಲೆದ್ದ ಈ ವಿವಾದವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಯಾವ ರೀತಿ ಶಮನಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/08/2022 05:25 pm

Cinque Terre

108.3 K

Cinque Terre

10

ಸಂಬಂಧಿತ ಸುದ್ದಿ