ಧಾರವಾಡ: ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಸಿದ್ಧಪಡಿಸಲಾದ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ-2022ನ್ನು ಜಾರಿಗೆ ತರಲು ಒತ್ತಾಯಿಸಿ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿ ಸಲ್ಲಿಸಲಾಯಿತು.
ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಜಾರಿಗೆ ತರಲು ಒಮ್ಮತದಿಂದ ಅನುಮೋದಿಸಬೇಕೆಂದು ತಾಲೂಕಾ ಅಧ್ಯಕ್ಷರಾದ ಶರಣಮ್ಮ ಗೊರೇಬಾಳ, ಗೌರವ ಕಾರ್ಯದರ್ಶಿಗಳಾದ ಮಾರ್ತಾಂಡಪ್ಪ ಕತ್ತಿ, ಮಹಾಂತೇಶ ನರೆಗಲ್ಲ ಅವರ ನೇತೃತ್ವದಲ್ಲಿ ಕಸಾಪ ನಿಯೋಗ ಮನವಿ ಸಲ್ಲಿಸಿದೆ.
ನ್ಯಾಯಮೂರ್ತಿ ಎಸ್. ಆರ್. ಬನ್ನೂರಮಠ ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗವು "ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022" ಕರಡನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹಾಗೂ ಸರ್ಕಾರಕ್ಕೆ 14-07-2022 ರಂದು ಸಲ್ಲಿಸಲಾಗಿತ್ತು.
ಈ ವಿಧೇಯಕದಲ್ಲಿ ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಕಾರ್ಯವ್ಯವಸ್ಥೆಯನ್ನು ರೂಪಿಸಲಾಗಿದೆ. ಇದಕ್ಕೋಸ್ಕರವಾಗಿ ರಾಜ್ಯಮಟ್ಟದ ಸಮಿತಿ, ಜಿಲ್ಲಾ ಮಟ್ಟದ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ, ರಾಜ್ಯಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಇವರು ಸದಸ್ಯರಾಗಿರುತ್ತಾರೆ. ಕೂಡಲೇ ಈ ವಿಧೇಯಕವನ್ನು ಜಾರಿಗೆ ತರಲು ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಲಾಯಿತು.
Kshetra Samachara
13/09/2022 01:39 pm