ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲೆಯಲ್ಲಿ 89 ಸಾವಿರ ಹೆಕ್ಟೇರ್ ಕೃಷಿ ಬೆಳೆ ನಾಶ: ಸಚಿವ ಬಿ.ಸಿ.ಪಾಟೀಲ

ಧಾರವಾಡ: ವಿಪರೀತ ಮಳೆಯಿಂದಾಗಿ ಪ್ರಸಕ್ತ ವರ್ಷ ಧಾರವಾಡ ಜಿಲ್ಲೆಯಾದ್ಯಂತ 89 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 61 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಹೆಸರು ಬೆಳೆ ನಾಶವಾಗಿದೆ. ನೀರಾವರಿ ಪ್ರದೇಶದಲ್ಲಿನ ಬೆಳೆ ಕೂಡ ನಾಶವಾಗಿದೆ. ಈಗಾಗಲೇ ಈ ಸಂಬಂಧ ಸರ್ವೆ ಕೂಡ ಮಾಡಿಸಿದ್ದೇವೆ. ಎನ್ಡಿಆರ್ಎಫ್ ಹಾಗೂ ಎಸ್ ಡಿಆರ್ ಎಫ್ನಿಂದ ಪರಿಹಾರ ಕೂಡ ಕೊಡಲಾರಂಭಿಸಿದ್ದೇವೆ ಎಂದರು.

ಪ್ರಸಕ್ತ ವರ್ಷ ಒಣಬೇಸಾಯದಲ್ಲಿನ ಹಾನಿಗೀಡಾದ ಪ್ರತಿ ಎಕರೆ ಬೆಳೆಗೆ 13,600 ಪರಿಹಾರ ನೀಡಲಾಗುತ್ತಿದೆ. ನೀರಾವರಿ ಪ್ರದೇಶದಲ್ಲಿನ ಹಾನಿಗೀಡಾದ ಬೆಳೆಗೆ 25 ಸಾವಿರ ಪರಿಹಾರ ನೀಡಲಾಗುತ್ತಿದೆ. ನಮ್ಮ ಸರ್ಕಾರ ಹೆಚ್ಚಿನ ಪರಿಹಾರ ನೀಡುತ್ತಿದೆ. ಕಳೆದ ವರ್ಷ 18 ಲಕ್ಷ ರೈತರಿಗೆ 2250 ಕೋಟಿ ಪರಿಹಾರ ನೀಡಿದ್ದೇವೆ ಎಂದರು.

ಧಾರವಾಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಅದನ್ನು ಕಟಾವು ಮಾಡಲು ಆಗುತ್ತಿಲ್ಲ. ಈ ಸಂಬಂಧ ವಿಮಾ ಕಂಪೆನಿಯವರೊಂದಿಗೂ ಸಭೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಇನ್ನೂ 10,235 ಟನ್ ಗೊಬ್ಬರ ದಾಸ್ತಾನು ಇದೆ. ಧಾರವಾಡ ಜಿಲ್ಲೆಯಲ್ಲಿ 34 ಸಾವಿರ ಲೀಟರ್ ನ್ಯಾನೋ ಯೂರಿಯಾ ಬಳಕೆ ಮಾಡಲಾಗಿದ್ದು, ಇದರಿಂದ ಭೂಮಿ ಕೂಡ ಫಲವತ್ತತೆ ಕಾಯ್ದುಕೊಳ್ಳುತ್ತದೆ. ನ್ಯಾನೋ ಯೂರಿಯಾ ಬಳಕೆ ಮಾಡುವುದರಲ್ಲಿ ಧಾರವಾಡ ಜಿಲ್ಲೆ ಮುಂದೆ ಇದೆ. ಇನ್ನು ಹಾಳಾದ ಹೊಲದ ರಸ್ತೆ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದ್ದು, ಪ್ರತಿ ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 65 ಸಾವಿರ ಅನುದಾನ ನೀಡಲಾಗುತ್ತಿದೆ ಎಂದರು.

ಸದ್ಯಕ್ಕೆ ರೈತರ ಸಾಲ ಮನ್ನಾ ವಿಚಾರ ಸರ್ಕಾರದ ಮುಂದೆ ಇಲ್ಲ. ರೈತರ ಸಾಲ ಮಾಡಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ಸೇರಿದಂತೆ ಒಟ್ಟು 10 ಸಾವಿರ ಕಿಸಾನ್ ಸಮ್ಮಾನ ಹಣ ನೀಡಲಾಗುತ್ತಿದೆ. ರಾಜ್ಯದ 53 ಲಕ್ಷ ರೈತರಿಗೆ ಕಂತು ರೀತಿಯಲ್ಲಿ ಅವರ ಅಕೌಂಟ್ಗೆ ಹಣ ಸಂದಾಯ ಮಾಡಲಾಗುತ್ತಿದೆ ಎಂದರು.

ಇನ್ನು ಧಾರವಾಡ ಕೃಷಿ ವಿವಿಗೆ ನೂತನ ಕುಲಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಈ ಸಂಬಂಧ ಸರ್ಚ್ ಕಮಿಟಿ ಆಗಿದೆ. ಸದ್ಯದಲ್ಲೇ ಐಸಿಆರ್ ನಿಂದ ನಿರ್ದೇಶನ ಬಂದ ಮೇಲೆ ಕೃಷಿ ವಿವಿಗೆ ನೂತನ ಕುಲಪತಿ ನೇಮಕ ಮಾಡಲಾಗುವುದು ಎಂದರು.

Edited By :
Kshetra Samachara

Kshetra Samachara

09/08/2022 06:03 pm

Cinque Terre

17.44 K

Cinque Terre

1

ಸಂಬಂಧಿತ ಸುದ್ದಿ