ಹುಬ್ಬಳ್ಳಿ: ಇವರು ಹಸಿರು ಕ್ರಾಂತಿಯ ಹರಿಕಾರ, ದೇಶದ ಉಪಪ್ರಧಾನಿ, ಆದರೆ ಇವರ ಹೆಸರಲ್ಲಿ ಒಂದು ಸಭಾ ಭವನ ಕಟ್ಟಲು ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ. ಸುಮಾರು 5 ವರ್ಷಗಳಾದರು ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮಾದಿಗ ಸಮಾಜದವರು ಶಾಸಕ ಪ್ರಸಾದ ಅಬ್ಬಯ್ಯ ಅವರ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಹೆಸರಲ್ಲಿ ಒಂದು ಸಮುದಾಯ ಭವನ ಕಟ್ಟಲು ನಿರ್ಧಾರ ಮಾಡಿದ್ದರು. ಅದೇ ರೀತಿ 2017 ರಲ್ಲಿ ಸುಮಾರು 9.15 ಕೋಟಿ ರೂಪಾಯಿ ಅನುದಾನದಡಿಯಲ್ಲಿ ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಎಚ್. ಆಂಜನೇಯ ಅವರು ಭೂಮಿ ಪೂಜೆ ಮಾಡಿದ್ದರು. ಆದರು ಕೂಡ ಇನ್ನುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಸಮುದಾಯ ಭವನಗಳು ಪೂರ್ಣಗೊಂಡಿವೆ. ಆದರೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಬಾಬು ಜಗಜೀವನರಾಮ್ ಅವರ ಭವನ ಇನ್ನೂವರೆಗೂ ಪೂರ್ಣಗೊಳಿಸಿಲ್ಲವೆಂದು ಮಾದಿಗ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಚುನಾವಣೆ ಬಂದಾಗ ಮಾತ್ರ ದಲಿತರ ಮತ ಬೇಕು. ಆದರೆ ಅಭಿವೃದ್ಧಿ ಗಗನಕುಸುಮವಾಗಿದೆ.ಕೂಡಲೆ ಅಬ್ಬಯ್ಯ ಅವರು ಬಾಬು ಜಗಜೀವನರಾಮ್ ಅವರ ಸಮುದಾಯ ಭವನವನ್ನು ಪೂರ್ಣಗೊಳಿಸಿ ಕೊಡದಿದ್ದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
07/04/2022 07:48 am