ಧಾರವಾಡ: ಅಬಬಾಬಾ.. ಇಲ್ನೋಡಿ.. ರಸ್ತೆ ಕಾಮಗಾರಿ ಮಾಡೇವಿ ಅಂತಾ ಎಷ್ಟ ಚೆಂದ ಬ್ಯಾನರ್ ಹಾಕ್ಯಾರ.. ಆದ್ರೆ ಇವ್ರು ಮಾಡಿಸಿದ ಕಾಮಗಾರಿ ಹೆಂಗ ಐತಿ ಅಂತಾನೂ ನೋಡ್ರಿ ಇಲ್ಲೆ..
ಇದು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ನಿಗದಿ ಗ್ರಾಮದ ಮೂಲಕ ಹಾದು ಬೆನಕನಕಟ್ಟಿ ಗ್ರಾಮಕ್ಕ ಸಂಪರ್ಕ ಕಲ್ಪಿಸೋ ರಸ್ತೆ. 5.66 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕ ಬರೊಬ್ಬರಿ 6 ಕೋಟಿ 46 ಲಕ್ಷ ರೂಪಾಯಿ ಖರ್ಚು ಮಾಡ್ಯಾರಂತ. ರಸ್ತೆ ಏನೋ ನಿರ್ಮಾಣ ಆತು. ಆದ್ರ ಆರ ತಿಂಗಳದಾಗ ಅಂದ್ರ ಈ ರಸ್ತೆ ಪರಿಸ್ಥಿತಿ ಹೆಂಗ ಆಗೇತಿ ನೀವ ನೋಡ್ರಿ.
ಈ ರಸ್ತೆ ಕಲಘಟಗಿ ಕ್ಷೇತ್ರದ ಶಾಸಕರಾದಂತ ಸಿ.ಎಂ.ನಿಂಬಣ್ಣವರ ಅವರ ಕ್ಷೇತ್ರಕ್ಕೆ ಬರತೈತಿ. ಸರ್ಕಾರದಿಂದ ಹಣ ಮಂಜೂರು ಮಾಡಿಸಿ ರಸ್ತೆ ಮಾಡಿಸೇವಿ ಅಂತಾ ಬ್ಯಾನರ್ ಕೂಡ ಹಾಕಿಸಿಕೊಂಡಾರ. ಹಾಕಿಸಿಕೊಳ್ಳಲಿ ಅವರ ಕೆಲಸಾ ಅವರ ಮಾತ. ಆದ್ರ ಆ ಕಾಮಗಾರಿ ಹೆಂಗ ಆಗೇತಿ ಅಂತಾ ಒಂದ ಸಲಾನು ಅವ್ರು ಪರೀಕ್ಷೆನ ಮಾಡಿಲ್ಲ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯೊಳಗ ಈ ಕೆಲಸಾ ಮಾಡಿಸ್ಯಾರ. ಬ್ಯಾನರ್‌ನ್ಯಾಗ ಪ್ರಧಾನ ಮಂತ್ರಿಗಳ ಫೋಟೋನು ಹಾಕಿಸ್ಯಾರ. ನಮ್ಮ ಪ್ರಧಾನಮಂತ್ರಿಗಳು ಒಮ್ಮೆ ಈ ರಸ್ತೆ ನೋಡಿದ್ರ ನಮ್ಮ ನಿಂಬಣ್ಣವರ ಸಾಹೇಬ್ರಿಗೆ ಒಂದು ದೊಡ್ಡ ಅವಾರ್ಡ್ ಕೊಡ್ತಾರ.
ಅಲ್ರಿ ಈ ರಸ್ತೆ ಕಾಮಗಾರಿ ಮುಗದ ಇನ್ನೂ ಆರು ತಿಂಗಳ ಕಳದಿಲ್ಲ. ಕೋಟಿ ಕೋಟಿ ರೂಪಾಯಿ ಇದಕ್ಕ ಖರ್ಚ ಮಾಡ್ಯಾರ. ಅಷ್ಟು ಮೊತ್ತದ ಕಾಮಗಾರಿ ಹೆಂಗ ಆಗಬೇಕಿತ್ತ ಅಂದ್ರ ದಶಕಗಳು ಕಳೆದ್ರೂ ರಸ್ತೆ ಹದಗೆಡಬಾರದಿತ್ತ. ಆದ್ರ, ಆರು ತಿಂಗಳದಾಗ ಡಾಂಬರ್ ಕಿತ್ತಗೊಂಡ ಹೋಗೇತಿ. ಇದೆಂತಾ ಕಾಮಗಾರಿನೋ ಏನೋ? ಇದನ್ನ ನೋಡಿದ್ರ ಕೋಟಿ ಕೋಟಿ ರೊಕ್ಕಾ ಲೂಟಿ ಆಗೇತಿ ಅನ್ನುದು ಗೊತ್ತಕ್ಕೈತಿ. ಶಾಸಕರೇ ಒಂದ ಸಲಾ ಈ ರಸ್ತೆಕ್ಕ ಭೇಟಿ ಕೊಡ್ರಿ.
Kshetra Samachara
20/01/2022 07:27 pm