ಧಾರವಾಡ: ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಕಾರಣ ಧಾರವಾಡದ ಕೆಲಗೇರಿ ರಸ್ತೆಯ ಶಾಂತಿನಿಕೇತನ ನಗರ, ಸಂಪಿಗೆನಗರ, ಸರೋವರ ನಗರ, ಬೇಂದ್ರೆ ನಗರ, ಪವನ ಪಾರ್ಕ್, ಆದಿತ್ಯ ಪಾರ್ಕ್, ಕೆಎಚ್‌ಬಿ ಕಾಲೊನಿ, ದೊಡ್ಡನಾಯಕನಕೊಪ್ಪದ ಸಾರ್ವಜನಿಕರು ಖಾಲಿ ಕೊಡಗಳೊಂದಿಗೆ ಗೋವಾ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕೂಡ ಸಾಥ್ ನೀಡಿದರು.
ಹುಬ್ಬಳ್ಳಿ, ಧಾರವಾಡ ಜಲಮಂಡಳಿ ಇಲ್ಲಿಯವರೆಗೆ ಸರ್ಕಾರದ ಅಧೀನದಲ್ಲಿತ್ತು. ಅದರ ಬದಲಾಗಿ ಖಾಸಗಿ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದ್ದರಿಂದ ಮಾನವ ಸಂಪನ್ಮೂಲ ಕೊರತೆಯಿಂದ ಕಳೆದ ಹತ್ತು ದಿನಗಳಿಂದ ಮಹಾನಗರದ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಆದ್ದರಿಂದ ಜಲಮಂಡಳಿಯಿಂದಲೇ ನೀರು ಪೂರೈಕೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಕೆಲ ಕಾಲ ರಸ್ತೆ ಬಂದ್ ಆಗಿದ್ದರಿಂದ ಸ್ಥಳಕ್ಕೆ ಬಂದ ಜಲಮಂಡಳಿ ಅಧಿಕಾರಿಗಳು ರಾತ್ರಿ 8 ಗಂಟೆಯೊಳಗಾಗಿ ಕುಡಿಯುವ ನೀರು ಪೂರೈಕೆಯಾಗಲಿದೆ ಎಂಬ ಭರವಸೆ ನೀಡಿದ ನಂತರವೇ ಸಾರ್ವಜನಿಕರು ತಮ್ಮ ಪ್ರತಿಭಟನೆ ಕೈಬಿಟ್ಟರು.
Kshetra Samachara
29/04/2022 03:38 pm