ಧಾರವಾಡ: ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಎರಡ್ಮೂರು ರಾಜ್ಯಕ್ಕೆ ಮಾತ್ರ ಕಾಂಗ್ರೆಸ್ ಸೀಮಿತವಾಗಿದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರೆಲ್ಲ ತಮ್ಮ ಮಾನಸಿಕ ಸ್ತೀಮಿತ ಕಳೆದುಕೊಂಡಿದ್ದಾರೆ ಎಂದರು.
ಕಾಶ್ಮೀರ ಗಲಭೆ ಇರಬಹುದು, ಪಾಕ್‌ಗೆ ಹೋಗಿ ಕೈ ನಾಯಕರು ಹೇಳಿಕೆ ನೀಡಿರುವುದು ಇರಬಹುದು, ಚೀನಾಕ್ಕೆ ಹೋಗಿ ಅಲ್ಲಿನ ಮುಖಂಡರ ಜೊತೆಗಿನ ಮಾತುಕತೆ ಇರಬಹುದು. ಇವೆಲ್ಲವನ್ನೂ ಬಿಜೆಪಿ ಸರ್ಕಾರವನ್ನು ಮಣಿಸುವುದಕ್ಕಾಗಿ ಕಾಂಗ್ರೆಸ್ ಈ ಕುಕೃತ್ಯ ಎಸಗುತ್ತಿದೆ. ದೇಶ ವಿರೋಧಿ ಸಂಘಟನೆಗಳ ಜೊತೆ ಕಾಂಗ್ರೆಸ್ ಸಂಪರ್ಕ ಇದೆ ಎಂದು ಹರಿಹಾಯ್ದರು.
ದೇಶಾದ್ಯಂತ ಗಲಭೆ ಸೃಷ್ಟಿಯಾಗಿರುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದಕ್ಕೆ ಯಾರಿಗೂ ಅಧಿಕಾರವಿಲ್ಲ. ಕಾಂಗ್ರೆಸ್ ಆರೋಪಕ್ಕೆ ಉತ್ತರಿಸುವ ಅಗತ್ಯವಿಲ್ಲ ಎಂದರು.
Kshetra Samachara
19/06/2022 09:07 pm