ಹುಬ್ಬಳ್ಳಿ: ಅತಿವೃಷ್ಟಿಯಿಂದ ಜಿಲ್ಲೆಯಾದ್ಯಂತ ಬಹಳಷ್ಟು ಮನೆಗಳು ಹಾನಿಗೀಡಾಗಿವೆ. ಮೇವಿನ ಬಣವಿಗಳು ಕೊಚ್ಚಿಹೋಗಿವೆ. ನಾಳೆಯಿಂದಲೇ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗುವುದು. ವರದಿ ಬಂದ ಕೂಡಲೇ ಸಂತ್ರಸ್ತರ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಲಾಗುವುದು ಎಂದು ಕೈಮಗ್ಗ, ಜವಳಿ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಅತಿವೃಷ್ಟಿ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ತಾಲೂಕಿನ ಭಂಡಿವಾಡ, ನಾಗರಳ್ಳಿ ಹಾಗೂ ಮಂಟೂರ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಹಾನಿ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಗೆ ಧಾರವಾಡ ಜಿಲ್ಲೆಯಲ್ಲಿಯೂ ವ್ಯಾಪಕ ಪರಿಣಾಮ ಬೀರಿದೆ. ಅಪಾರ ಸಂಖ್ಯೆಯಲ್ಲಿ ಮನೆಗಳು ಹಾನಿಯಾಗಿವೆ. ದನ ಕರುಗಳಿಗೆ ಅಗತ್ಯವಿರುವ ಮೇವಿನ ಬಣವಿಗಳು ಕೊಚ್ಚಿಹೋಗಿವೆ. ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದ ಪ್ರವಾಹದಿಂದ ಹೊಲಗಳು ಜಲಾವೃತವಾಗಿವೆ. ಜಿಲ್ಲಾಡಳಿತ ನಾಳೆಯಿಂದಲೇ ಸಮೀಕ್ಷೆ ಕಾರ್ಯ ಪ್ರಾರಂಭಿಸಲಿದೆ. ಪ್ರಸ್ತಾವನೆ ಬಂದ ಕೂಡಲೇ ಸರ್ಕಾರದಿಂದ ನೇರವಾಗಿ ಸಂತ್ರಸ್ತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಲಿದೆ. ತುಪ್ಪರಿಹಳ್ಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಒದಗಿಸಲು ಈಗಾಗಲೇ 312 ಕೋಟಿ ರೂ.ಗಳ ಯೋಜನೆ ಜಾರಿಯಲ್ಲಿದೆ ಎಂದರು.
ಬೆಣ್ಣೆಹಳ್ಳ ಪ್ರವಾಹ ಶಾಶ್ವತ ಪರಿಹಾರಕ್ಕೂ ಕ್ರಮವಹಿಸಲು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ. ಜನರ ಜೀವ ರಕ್ಷಣೆ ಮುಖ್ಯ,ಹೊಲ,ದನ ಕರುಗಳ ಕಾರ್ಯಕ್ಕೆ ತೆರಳುವ ಮುನ್ನ ಮಳೆ,ಹಳ್ಳದ ಹರಿವುಗಳ ಬಗ್ಗೆ ರೈತರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮನವಿ ಮಾಡಿದರು.
Kshetra Samachara
21/05/2022 08:36 am