ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕು ಎಂದು ಆಗ್ರಹಿಸಿ ಆರಂಭಗೊಂಡಿರುವ ಹೋರಾಟ ಇದೀಗ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕುವಂತೆ ಮಾಡಿದೆ.
ಹೌದು! ಕಳೆದ ಕೆಲ ದಿನಗಳಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕು ಎಂದು ಆಗ್ರಹಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸದಸ್ಯರು ಧರಣಿ ನಡೆಸುತ್ತಿದ್ದಾರೆ.
ಶನಿವಾರ ಅರವಿಂದ ಬೆಲ್ಲದ ಅವರ ಧಾರವಾಡದ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಮಾಡಲು ಶಾಸಕರು ಪ್ರಯತ್ನಿಸಬೇಕು ಎಂದು ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು. ಆದರೆ, ಆ ಮನೆಯಲ್ಲಿ ಶಾಸಕರು ಇಲ್ಲದೇ ಇದ್ದಿದ್ದರಿಂದ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ ಹೋರಾಟಗಾರರು ತಮ್ಮ ಬೇಡಿಕೆಯನ್ನು ಅವರ ಮುಂದಿಟ್ಟರು. ಇದಕ್ಕೂ ಮುನ್ನ ಬೆಲ್ಲದ ಅವರ ಮನೆಯಲ್ಲಿನ ಸಿಬ್ಬಂದಿ ಹೋರಾಟಗಾರರಿಗೆ ಮಜ್ಜಿಗೆ ತಂದು ಕೊಡಲು ಮುಂದಾದರು. ಆದರೆ, ಅದನ್ನು ನಿರಾಕರಿಸಿದ ಹೋರಾಟಗಾರರು, ಬೆಲ್ಲದ ಅವರು ದೂರವಾಣಿ ಮುಖಾಂತರ ಮಾತನಾಡಿದ ನಂತರವೇ ಮಜ್ಜಿಗೆ ಸ್ವೀಕರಿಸಿದರು.
ಅಲ್ಲಿಂದ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಮನೆಗೂ ಮುತ್ತಿಗೆ ಹಾಕಿದ ಹೋರಾಟಗಾರರು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಜಾರಿ ಮಾಡುವಲ್ಲಿ ಶಾಸಕರು ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು. ಆದರೆ, ಅಮೃತ ದೇಸಾಯಿ ಅವರೂ ಮನೆಯಲ್ಲಿ ಇಲ್ಲದೇ ಇದ್ದಿದ್ದರಿಂದ ಅವರ ಆಪ್ತ ಸಹಾಯಕರಿಗೆ ತಮ್ಮ ಮನವಿ ಸಲ್ಲಿಸಿದರು. ಆನಂತರ ಶಾಸಕರೊಂದಿಗೆ ಹೋರಾಟಗಾರರು ದೂರವಾಣಿಯಲ್ಲಿ ಮಾತನಾಡಿ ತಮ್ಮ ಬೇಡಿಕೆಗಳನ್ನು ಅವರ ಮುಂದಿಟ್ಟರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/04/2022 03:02 pm