ಹುಬ್ಬಳ್ಳಿ: ನಕಲಿ ಗಾಂಧಿ ಪರಿವಾರ ಭ್ರಷ್ಟಾಚಾರದ ಬಗ್ಗೆ ಮಾತನಾಡೋದೆ ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ರಾಹುಲ್ ಗಾಂಧಿ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣವೇ ವಿಶ್ರಾಂತಿಗಾಗಿ ವಿದೇಶಕ್ಕೆ ಹೋಗುತ್ತಾರೆ. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ ಜನರು ಯಾರು ಯಾರ ಪರ ಇದ್ದಾರೆ ಎಂಬುದರ ಬಗ್ಗೆ ತಮ್ಮ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದಲ್ಲಿ 10 ವರ್ಷ ನಿರಂತರವಾಗಿ ಭ್ರಷ್ಟಾಚಾರ ಹಗರಣದ್ದೇ ಸುದ್ದಿ ಇತ್ತು ಎಂದರು.
ಇನ್ನು, ಮೋದಿ ಆಡಳಿತದಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂಬ ರಾಗಾ ಮಾತಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾರ ಕಾಲದಲ್ಲಿ ಹೆಚ್ಚು ಸಾಲ ಆಗಿದೆ ಎಂಬುದಕ್ಕೆ ಅಂಕಿ ಅಂಶಗಳಿವೆ. ಕೊರೊನಾ ಹಾವಳಿ ಕಾಲದ ನಾಜೂಕಿನ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಭಾರತ ಅಭಿವೃದ್ಧಿ ಹೊಂದುತ್ತಿದ್ದು, ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಆಗಿದೆ. ಹೀಗಾಗಿ ಭಾರತದ ಹಿರಿಮೆ ಗರಿಮೆ ಬಗ್ಗೆ ಅಪಪ್ರಚಾರ ಮಾಡಬಾರದು ಎಂದರು.
ಈಗಾಗಲೇ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ 398 ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಡಿಪಾಸಿಟ್ ಕಳೆದುಕೊಂಡಿದೆ. ಇದೀಗ ರಾಗಾ ಇನ್ನೊಬ್ಬರು ಬರೆದು ಕೊಟ್ಟಿದ್ದನ್ನು ನಾಚಿಕೆ- ಮಾನ ಮರ್ಯಾದೆ ಇಲ್ಲದೇ ಓದುತ್ತಾರೆ. ಚೀಟಿ ವಾಪಸ್ ಪಡೆದ ನಂತರ ಅದರಲ್ಲಿನ ವಿಷಯ ಗೊತ್ತಿರಲ್ಲ ಎಂದು ರಾಗಾ ವಿರುದ್ಧ ಕಿಡಿಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/10/2022 03:58 pm