ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಳ್ನಾವರ ತಾಲೂಕಿನ ಜನತೆಯ ಅಹವಾಲು ಆಲಿಸಿದ ಕೇಂದ್ರ ಸಚಿವ ಜೋಶಿ

ಧಾರವಾಡ: ಧಾರವಾಡ- ರಾಮನಗರ ರಸ್ತೆಯಲ್ಲಿ ಅರ್ಧಕ್ಕೆ ಸ್ಥಗಿತವಾಗಿರುವ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿಗಳನ್ನು ಪುನರಾರಂಭಿಸುವ ಕಾಮಗಾರಿ ಕುರಿತ ವಿಷಯವನ್ನು ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಹಾರ ಕೈಗೊಳ್ಳಲು ಮುಖ್ಯಮಂತ್ರಿಯವರು ಹಾಗೂ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಂವಹನ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಅಳ್ನಾವರ ಪಟ್ಟಣ ಪಂಚಾಯತ ಆವರಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. 'ಸರ್ಕಾರಿ ಭೂಮಿ ಹೆಸರಿನಲ್ಲಿ ಬೆಳೆವಿಮೆ ತುಂಬಿ, ಪರಿಹಾರ ಪಡೆದುಕೊಳ್ಳುವ ಗಂಭೀರ ಅಕ್ರಮಗಳು ಈ ಹಿಂದೆ ಇಲ್ಲಿ ವರದಿಯಾಗಿವೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪೊಲೀಸ್ ಪ್ರಕರಣ ದಾಖಲಾಗಿದೆ, ಜಂಟಿ ಕೃಷಿ ನಿರ್ದೇಶಕರು, ತಹಶೀಲ್ದಾರರು ಜಂಟಿಯಾಗಿ ಪರಿಶೀಲಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು' ಎಂದು ಸೂಚಿಸಿದರು.

ಇಂದಿನ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಅಹವಾಲುಗಳನ್ನು ಇಲಾಖಾವಾರು ಪಟ್ಟಿ ಮಾಡಿ ತಹಶೀಲ್ದಾರರು ನಮ್ಮ ಕಚೇರಿಗೆ ಸಲ್ಲಿಸಬೇಕು. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಪರಿಹರಿಸಲು ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳ ಜಂಟಿ ಸಭೆ ಆಯೋಜಿಸಿ ಪರಿಹಾರ ಒದಗಿಸಲಾಗುವುದು ಎಂದರು.

ತಾಲೂಕು, ಜಿಲ್ಲಾ ಹಂತದಲ್ಲಿ ಪರಿಹಾರವಾಗುವ ಕಾರ್ಯಗಳನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಫಾಲೋ ಅಪ್ ಮೂಲಕ ಪರಿಹಾರ ಒದಗಿಸಲು ಸಾರ್ವಜನಿಕರಿಗೆ ಸಹಕರಿಸಬೇಕು ಎಂದರು.

ಸಾರ್ವಜನಿಕ ಅಹವಾಲುಗಳಿಗೆ ಕೇಂದ್ರ ಸಚಿವರ ಸ್ಪಂದನೆ: ಅಳ್ನಾವರ ಪಟ್ಟಣದಲ್ಲಿ ಹೊಸ ಅಂಚೆ ಕಚೇರಿ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಅಂಚೆ ಕಚೇರಿಗೆ ಮೀಸಲಿಟ್ಟಿರುವ ಜಾಗೆ ಅತಿಕ್ರಮಣವಾಗದಂತೆ ರಕ್ಷಣೆಗೆ ಎಚ್ಚರವಹಿಸಬೇಕು. ಅಳ್ನಾವರ ಪಟ್ಟಣದಲ್ಲಿ ಸೂಕ್ತ ನಿವೇಶನ ಗುರುತಿಸಿದರೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಿಸಲಾಗುವುದು. 15 ದಿನದೊಳಗೆ ಸ್ಥಳೀಯ ಪಟ್ಟಣಪಂಚಾಯತಿ ಪ್ರತಿನಿಧಿಗಳು, ಅಧಿಕಾರಿಗಳು ನಿವೇಶನ ಗುರುತಿಸಲು ಸೂಚಿಸಿದರು. ಅಳ್ನಾವರ ಪಟ್ಟಣದ ಕೆರೆಗಳ ನಿರ್ವಹಣೆಯ ಹೊಣೆಯನ್ನು ಪಟ್ಟಣ ಪಂಚಾಯತಿಗೆ ವಹಿಸಲಾಗಿದೆ. ಹಿರೇಕೆರೆ ಸೇರಿ ಅಳ್ನಾವರದ ನಾಲ್ಕು ಕೆರೆಗಳನ್ನು ಅಮೃತ-2 ಯೋಜನೆಯಡಿ ಅಭಿವೃದ್ಧಿ ಪಡಿಸಲು ನಿರ್ದೇಶನ ನೀಡಿದರು. ಅಳ್ನಾವರದ ರಸ್ತೆ, ರಾಜಕಾಲುವೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಿ ಬಂದ ಮನವಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ವಿವಿಧ ಅಭಿವೃದ್ಧಿ ಯೋಜನೆಗಳಡಿ ಭಾರತ ಸರ್ಕಾರ ಅನುದಾನ ಒದಗಿಸುತ್ತಿದೆ. ಅವುಗಳಲ್ಲಿ ಸೂಕ್ತ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದರು.

ಅಳ್ನಾವರ ರೇಲ್ವೆ ನಿಲ್ದಾಣವು ಬಹಳ ಹಿಂದೆ ನಿರ್ಮಾಣವಾಗಿದ್ದು, ಅಲ್ಲಿ ಶೌಚಾಲಯ, ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು. ಉದ್ಯಾನವನ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಭರವಸೆ ನೀಡಿದರು. ಬೆಳಗಾವಿ ಅಥವಾ ಲೋಂಡಾದಿಂದ ಹುಬ್ಬಳ್ಳಿಗೆ ಸ್ಥಳೀಯ ಪ್ಯಾಸೆಂಜರ್ ರೇಲ್ವೇ ಸಂಚಾರ ಪುನರಾರಂಭಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸಚಿವರು ಈ ಕುರಿತು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಒದಗಿಸುವುದಾಗಿ ಹೇಳಿದರು. ಅಳ್ನಾವರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಶಾಲೆಯ ಕಟ್ಟಡ ಹಾಗೂ ಶೌಚಾಲಯ ನಿರ್ಮಾಣಕ್ಕೆ ಕೋರಿ ಅಹವಾಲು ಸಲ್ಲಿಸಿದರು. ಹುಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ದುರಸ್ತಿ ಕಾಮಗಾರಿಯನ್ನು 15 ದಿನಗಳೊಳಗೆ ಪ್ರಾರಂಭಿಸಬೇಕು. ಕಾಮಗಾರಿ ಸ್ಥಳದಲ್ಲಿ ಒಟ್ಟು ವೆಚ್ಚ, ಕಾಮಗಾರಿ ವಿವರ, ಗುತ್ತಿಗೆದಾರರ ಹೆಸರು, ಸಂಪರ್ಕ ಸಂಖ್ಯೆ ವಿವರಗಳ ಫಲಕ ಹಾಕಬೇಕು ಎಂದರು.

ಕಾರ್ಯಕ್ರಮದಲ್ಲಿ 105 ಕ್ಕೂ ಹೆಚ್ಚು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಉತ್ತರ, ಪರಿಹಾರ ಒದಗಿಸಲಾಯಿತು.

Edited By : Vijay Kumar
Kshetra Samachara

Kshetra Samachara

17/02/2022 08:49 pm

Cinque Terre

48.43 K

Cinque Terre

0

ಸಂಬಂಧಿತ ಸುದ್ದಿ