ಆತ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ. ಒಂದಿಲ್ಲೊಂದು ವಿವಾದಗಳನ್ನ ತನ್ನ ಮೇಲೆ ಹಾಕಿಕೊಳ್ಳುತ್ತಲೇ ಇರ್ತಾನೆ. ಈಗ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡು ಆಸ್ತಿ ಹೊಡೆಯಲು ಪ್ಲ್ಯಾನ್ ಮಾಡಿದ್ದು ಅಲ್ಲದೇ, ಅದಕ್ಕೆ ರಾಜಕೀಯ ಬಣ್ಣ ಹಚ್ಚಲು ಮುಂದಾಗಿದ್ದಾನಂತೆ. ಇದರಿಂದಾಗಿ ಈತನ ಕಾಟಕ್ಕೆ ಬೇಸತ್ತ ಆ ಕುಟುಂಬ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿಯ ಕಾರ್ಪೋರೇಟರ್ ಗುಂಜಾಳ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೆಪ್ಟಂಬರ್ 4ರಂದು ಕಾರ್ಪೋರೇಟರ್ ಸುಮಿತ್ರಾ ಗುಂಜಾಳ ಕುಟುಂಬದ ಮೇಲೆ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಹಾಗೂ ಭಾಮೈದ ಹರ್ಷವರ್ಧನ್ ಸೇರಿಕೊಂಡು ಹಲ್ಲೆ ನಡೆಸಿದ್ದರು. ಈ ದುರ್ಘಟನೆಯಲ್ಲಿ 95ವರ್ಷದ ಅಜ್ಜಿ ಗೌರವ್ವ ಮೈಮೇಲೆ ಗಾಯಗಳಾಗಿದ್ದವು. ಕೈ ಮೇಲೆ ರಕ್ತ ಹೆಪ್ಪುಗಟ್ಟುವಂತೆ ಗಿರೀಶ್ ಮತ್ತು ಹರ್ಷವರ್ಧನ್ ಸೇರಿ ಥಳಿಸಿದ್ದರು. ಈ ಕುರಿತು ಗಿರೀಶ್ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಈಗ ಪ್ರಕರಣದ ಹಾದಿ ತಪ್ಪಿಸಲು ಮುಂದಾಗಿದ್ದಾರೆಂದು ಗುಂಜಾಳ ಕುಟುಂಬದವರು ನೇರ ಆರೋಪ ಮಾಡುತ್ತಿದ್ದಾರೆ.
ಇನ್ನು ಗಂಡ ಹೆಂಡತಿ ಜಗಳಕ್ಕೆ ಆಸ್ತಿ ವಿವಾದದ ಬಣ್ಣಹಚ್ಚಿ, ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ಅಲ್ಲದೇ, ಹಲ್ಲೆಗೊಳಗಾದವರ ಮೇಲೆ ದೂರು ನೀಡಲು ಮುಂದಾಗಿದ್ದಾನೆ. ಗುಂಜಾಳ ಕುಟುಂಬಸ್ಥರು ಮಾತ್ರ ಜಯಲಕ್ಷ್ಮಿ ಮತ್ತು ಗಿರೀಶ್ ಗದಿಗೆಪ್ಪಗೌಡರ ಇವತ್ತೇ ಬಂದು ನಮ್ಮನ್ನ ಆಸ್ತಿ ಕೇಳಿದ್ರೆ ನಾವು ಆಸ್ತಿ ಬಿಟ್ಟು ಕೊಡಲು ಸಿದ್ದ. ಇವತ್ತೇ ನೋಂದಣಾಧಿಕಾರಿಗಳ ಕಚೇರಿಗೆ ಬರುತ್ತೇವೆ. ಆಸ್ತಿ ಬಿಟ್ಟು ಕೊಡಲು ಸಹಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಲ್ಲದೇ ಗಿರೀಶ್ ಗದಿಗೆಪ್ಪಗೌಡರ ಆಸ್ತಿಯನ್ನ ಹೊಡೆಯುವ ಅವಶ್ಯಕತೆ ನಮಗಿಲ್ಲ. ಅವರಿಬ್ಬರ ಗಂಡ ಹೆಂಡತಿ ಜಗಳದಲ್ಲಿ ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಗಿರೀಶ್ ಗದಿಗೆಪ್ಪಗೌಡರ ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ಎನ್ನುತ್ತಿದೆ ಪಾಲಿಕೆ ಸದಸ್ಯೆಯ ಕುಟುಂಬ.
ಒಟ್ನಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಈ ಹಿಂದೆ ಹಲವು ವಿವಾದಗಳಿಗೆ ಗುರಿಯಾಗಿದ್ದರು. ಈಗ ಮತ್ತೊಂದು ವಿವಾದದ ಸುಳಿಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಪ್ತ ಗಿರೀಶ್ ಸಿಲುಕಿಕೊಂಡಿದ್ದಾನೆ. ಆಸ್ತಿಯನ್ನ ಮಾರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಏನೇ ಆಗಲಿ ಗಂಡ ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತಾಗಿದೆ ಪಾಲಿಕೆ ಸದಸ್ಯರ ಕುಟುಂಬದ ಸ್ಥಿತಿ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2022 08:02 pm