ಧಾರವಾಡ: ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಆರೋಪದಡಿ ಕಾಂಗ್ರೆಸ್ ಮುಖಂಡ ಮನೋಜ ಕರ್ಜಗಿ ಮೇಲೆ ದೂರು ದಾಖಲಾಗಿದ್ದು ವಿದ್ಯಾಗಿರಿ ಠಾಣೆ ಪೊಲೀಸರು ಕರ್ಜಗಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಮ್ಮದೇ ಮಾಲೀಕತ್ವದ ಲೆ ಮೊರ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳೊಂದಿಗೆ ಮನೋಜ ಕರ್ಜಗಿ ಅಸಭ್ಯವಾಗಿ ವರ್ತಿಸಿದ್ದ. ಈ ವಿಷಯವನ್ನು ಯುವತಿ ತನ್ನ ಕಡೆಯವರಿಗೆ ತಿಳಿಸಿದ್ದರಿಂದ ಎತ್ತಿನಗುಡ್ಡದ ಮನು ಗುಡದೂರ, ಉದಯ ಹಾಗೂ ಇತರ ಸಹಚರರು ಸ್ಥಳಕ್ಕೆ ಬಂದು ಮನೋಜನ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆ ಬಿಡಿಸಲು ಬಂದ ಅಯಾನ್ ಎಂಬಾತನ ಮೇಲೂ ದಾಳಿ ನಡೆಸಲಾಗಿತ್ತು.
ಈ ಸಂಬಂಧ ಯುವತಿ ವಿದ್ಯಾಗಿರಿ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮನೋಜ ಅವರ ಮೇಲೆ ದೂರು ದಾಖಲಿಸಿದ್ದಳು. ದೂರಿನ ಆಧಾರದ ಮೇಲೆ ಮನೋಜ ಕರ್ಜಗಿಯನ್ನು ಪೊಲೀಸರು ವಶಕ್ಕೆ ಪಡೆದು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕರ್ಜಗಿ ಕೈಗೆ ಪೆಟ್ಟಾಗಿದ್ದರಿಂದ ಹಾಗೂ ರಕ್ತದೊತ್ತಡ ಹೆಚ್ಚಾಗಿದ್ದರಿಂದ ಆತನನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಕರ್ಜಗಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮನೋಜ ಕರ್ಜಗಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿದ್ದರು.
ಇನ್ನು ಮನೋಜ ಕರ್ಜಗಿ ಕೂಡ ಹಲ್ಲೆ ಮಾಡಿದವರ ಮೇಲೆ ಪ್ರತಿದೂರು ದಾಖಲಿಸಿದ್ದು, ಯುವತಿ ಕಡೆಯ ನಾಲ್ಕು ಜನರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2022 11:24 am