ಹುಬ್ಬಳ್ಳಿ: ಉದ್ಯಮ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿ ವಾಣಿಜ್ಯನಗರಿ ಖ್ಯಾತಿಯನ್ನು ಇಮ್ಮಡಿಗೊಳಿಸಲು ಸರ್ಕಾರ ಗೋಕುಲ ರಸ್ತೆಯ ಪಕ್ಕ 1965ರಲ್ಲಿ ಕಿರ್ಲೋಸ್ಕರ್ ಕಂಪನಿ ಲಿಮಿಟೆಡ್‌ಗೆ ಕೈಗಾರಿಕೆ ಉದ್ದೇಶಕ್ಕೆ ಬಳಸಿಕೊಳ್ಳಲು 83 ಎಕರ 23 ಗುಂಟೆ ಮಂಜೂರು ಮಾಡಿತ್ತು. ಆದರೆ ಈ ಜಮೀನನ್ನು ಕಂಪನಿಯು ಪೂರ್ಣ ಪ್ರಮಾಣದಲ್ಲಿ ಇನ್ನೂ ಬಳಸಿಕೊಂಡಿಲ್ಲ. ಹೀಗಿರುವಾಗ ರಿಯಲ್ ಎಸ್ಟೇಟ್ ಕುಳಗಳು ಈ ಆಸ್ತಿ ಹೊಡೆಯಲು ಹುನ್ನಾರ ನಡೆಸಿವೆ. ಅಲ್ಲದೇ ಸರ್ಕಾರ ಜಮೀನು ನುಂಗಿ ನೀರು ಕುಡಿಯಲು ಅದೆಷ್ಟೋ ಸೆಣಸಾಟ ಕೂಡ ನಡೆಸಿವೆ.
ಹೀಗೆ ಉಳಿದ ಭೂಮಿ ಮೇಲೆ ಕೆಲ ರಿಯಲ್ ಎಸ್ಟೇಟ್ ಕುಳಗಳು ಕಣ್ಣು ಹಾಕಿ ನುಂಗಿ ಹಾಕಲು ಮುಂದಾಗಿದ್ದು, ಕಳೆದ ಮಾರ್ಚ್ 29ರಂದೇ ಸಚಿವ ಶಂಕರ ಪಾಟೀಲ್ ಮುನೇನಕೊಪ ಅವರು ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೂ ಕೂಡಾ ಇನ್ನೂ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆಗೆ ಮುಂದಾಗದೇ ಇರುವುದು ಆಡಳಿತ ಯಂತ್ರ ಸರ್ಕಾರದ ಜಮೀನು ಉಳಿಸುವ ಪರವಾಗಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಕೆಲ ಕುಳಗಳ ಬೆಂಬಲಕ್ಕೆ ನಿಂತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನೂರಾರು ಕೋಟಿ ಬೆಳೆ ಬಾಳುವ ಚಿನ್ನದಂತ ಭೂಮಿಯನ್ನು ರಾತೋ ರಾತ್ರಿ ಗುಳಂ ಮಾಡಲು ರಿಯಲ್ ಎಸ್ಟೇಟ್ ಕುಳಗಳು ಲೆಕ್ಕಾಚಾರ ಹಾಕಿ ತರಾತುರಿಯಲ್ಲಿ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಮಾಜಿ ಸಚಿರೊಬ್ಬರ ಹತ್ತಿರದ ಸಂಬಂಧಿಯೇ ಇದಲಿ ಮುಂಚೂಣಿಯಲ್ಲಿದ್ದಾರೆ. ಮಾಜಿ ಸಚಿವರ ಹೆಸರಿನ ಮೇಲೆ ಶತಾಯಗತಾಯ ಭೂಮಿ ಕಬಳಿಸುವಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಸರ್ಕಾರದ ಜಮೀನು ಬೇರೆಯವರಿಗೆ ಅನಧಿಕೃತ ಕೈಸೇರಲು ಬಿಡುವುದಿಲ್ಲ ಅಂತಿದ್ದಾರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು.
ಇನ್ನೂ ಸಚಿವ ಶಂಕರ ಪಾಟೀಲ್ ಮುನೇನಕೊಪ ಅವರು, ಸರ್ಕಾರ ಒಳ್ಳೆಯ ಉದ್ದೇಶಕ್ಕೆ ಕಂಪನಿಗೆ ಕೊಟ್ಟ ಜಮೀನು ನಿರ್ದಿಷ್ಟ ಉದ್ದೇಶಕ್ಕೇ ಬಳಕೆ ಆಗಬೇಕೆ ಹೊರತು ರಿಯಲ್ ಎಸ್ಟೇಟ್ ಕುಳಗಳ ಪಾಲು ಆಗಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತುರ್ತಾಗಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಕಿರ್ಲೋಸ್ಕರ್ ಕಂಪನಿಗೆ ಕೊಟ್ಟ ಜಮೀನು ರಿಯಲ್ ಎಸ್ಟೇಟ್‌ನ ಕೆಲ ಕುಳಗಳಿಗಾಗಲಿ ಅಥವಾ ಇನ್ಯಾರಿಗೇ ಆಗಲಿ ಕೊಡಬಾರದು ಎಂದು ಒತ್ತಾಯ ಮಾಡಿದ್ದಾರೆ. ಸಚಿವರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಭೂಮಿ ಕಣ್ಣಿಟ್ಟಿರುವರಿಯಲ್ ಎಸ್ಟೇಟ್ ಕುಳಗಳು ಕ್ಯಾರೆ ಎಂದಿಲ್ಲ. ಬದಲಾಗಿ ಕಬಳಿಕೆ ತಂತ್ರಗಳನ್ನು ಮತ್ತಷ್ಟು ಚುರುಕುಗೊಳಿಸಿವೆ. ಅಲ್ಲದೇ ರಾಜಕೀಯ ಪವರ್ ಹಾಗೂ ಪದವಿಯನ್ನು ಬಳಸಿ ಕೆಲವು ಮುಖಂಡರು ಡೀಲ್ ಕೂಡ ಮಾಡಿರುವುದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದರೇ ಈ ಕುರಿತು ಹುಡಾ ಕೂಡ ಕೋರ್ಟ್ ನಲ್ಲಿ ಫೈಟ್ ಮಾಡಿದೆಯಂತೆ.
ಒಟ್ಟಿನಲ್ಲಿ ಯಾರದೋ ಆಸ್ತಿಗೆ ಯಾರೋ ಯಜಮಾನರಾಗಲು ನಡೆಸಿರುವ ಹುನ್ನಾರಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬ್ರೇಕ್ ಹಾಕುವುದಂತೂ ಖಂಡಿತ. ಕಾಣದ ಕೈಗಳ ಕೈವಾಡದ ಸ್ಪೋಟಕ ಮಾಹಿತಿಯೊಂದು ಮತ್ತೊಂದು ವಿಸ್ತೃತ ವರದಿಗೆ ನಿರೀಕ್ಷಿಸಿ ನಿಮ್ಮ ಪಬ್ಲಿಕ್ ನೆಕ್ಸ್ಟ್...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 10:19 pm