ಹುಬ್ಬಳ್ಳಿ : ನರೇಗಾ ಕಾಮಗಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಕಾಮಧೇನು ಕಲ್ಪವೃಕ್ಷ. ಯಾರದೋ ಮದುವೇಲಿ ಉಂಡವನೇ ಜಾಣ ಎಂಬಂತೆ ನರೇಗಾ ಕಾಮಗಾರಿಗಳೆಂದರೆ ಮುಗಿ ಬೀಳುತ್ತಾರೆ. ಏಕೆಂದರೆ ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ.
ಮಾಡಿದ್ದೇ ಕೆಲಸ, ತಯಾರಿಸಿದ್ದೇ ಬಿಲ್ಲು ಹಣ ನುಂಗಿದ್ದೇ ಬಂತು. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿವರೆಗೂ ಎಲ್ಲರೂ ನುಂಗಣ್ಣಗಳೇ.
ಇಂತಹ ಪ್ರಕರಣವೊಂದು ಅಣ್ಣಿಗೇರಿ ತಾಲೂಕ ಬಸಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನಿಗದಿತ ಕಾಮಗಾರಿ ನಡೆದಿಲ್ಲ, ನಡೆದರೂ ಎಲ್ಲ ಬೇಕಾಬಿಟ್ಟಿ. ಕಾಮಗಾರಿ ಮುಗಿಯದಿದ್ದರೂ ಲಕ್ಷ ಲಕ್ಷ ಬಿಲ್ ಪಾಸ್.
ಇಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ದಾಖಲೆಯೊಂದಿಗೆ ಬಸಾಪುರ ಗ್ರಾ.ಪಂ, ಅಣ್ಣಿಗೇರಿ ತಾ.ಪಂ ಹಾಗೂ ಧಾರವಾಡ ಜಿಲ್ಲಾ ಪಂಚಾಯಿತಿಗೆ ದೂರು ನೀಡಿದರೂ ಅಧಿಕಾರಿಗಳಿಂದ ಉತ್ತರವಿಲ್ಲ. ಎಲ್ಲರೂ ಗಪ್ ಚುಪ್ ವ್ಯವಹಾರ ನಡೆದಿದೆ ಎಂದು ದೂರಿದ್ದಾರೆ ಗ್ರಾಮದ ಯುವಕ ಗಂಗಾಧರ ತೊರವಿ.
ಪಬ್ಲಿಕ್ ನೆಕ್ಸ್ಟ್ ಗೆ ಎಲ್ಲ ದಾಖಲೆ ಪೂರೈಸಿ ಹಗರಣವನ್ನು ಬಯಲಿಗೆಳೆಯಲು ಮನವಿ ಮಾಡಿದ್ದಾರೆ.
ಬಸಾಪುರ ಸಮೀಪ ನವಲಗುಂದ ರಸ್ತೆಯಲ್ಲಿ ಅಂದಾಜು 7.50 ಲಕ್ಷ ವೆಚ್ಚದಲ್ಲಿ ಗಟಾರು ನಿರ್ಮಾಣ ಮಾಡಬೇಕಾಗಿತ್ತು. ನರೇಗಾ ಕಾಮಗಾರಿಯಲ್ಲಿ 4X4 ಆಳ ಹಾಗೂ ಅಗಲದೊಂದಿಗೆ ಒಟ್ಟು 135 ಅಡಿ ಉದ್ದದ ಗಟಾರು ನಿರ್ಮಿಸಬೇಕಾಗಿತ್ತು.
ಆದರೆ ಇವರು ಮಾಡಿದ್ದೇನು ಗೊತ್ತೆ? 3X3 ಆಳ ಅಗಲ ಹಾಗೂ ಕೇವಲ 80 ಅಡಿ ಉದ್ದದ ಗಟಾರು ನಿರ್ಮಿಸಿ ಬಿಲ್ ಮಾಡಿಕೊಂಡು ಬಿಟ್ಟಿದ್ದಾರೆ ಅಧಿಕಾರಿಗಳು.
ಹುಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದ ಸುರೇಶ್ ಇಟ್ನಾಳ್ ಅವರು ಈಗ ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಒ.
ಇಟ್ನಾಳ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
25/04/2022 07:45 pm