ಧಾರವಾಡ: ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ಜರುಗುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಮತಗಟ್ಟೆಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲು ಮತ್ತು ಕರ್ತವ್ಯನಿರತ ಸಿಬ್ಬಂದಿ ಹಾಗೂ ಮತದಾನಕ್ಕೆ ಆಗಮಿಸುವ ಮತದಾರರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಚುನಾವಣಾ ಆಯೋಗ ಹಾಗೂ ಆರೋಗ್ಯ ಇಲಾಖೆಯ ಸೂಚಿಸಿರುವ ಎಸ್‍ಓಪಿ ಮಾರ್ಗಸೂಚಿಗಳಂತೆ ಅಗತ್ಯ ಕ್ರಮ ಕೈಗೊಂಡು ಪ್ರತಿ ಮತಗಟ್ಟೆಗೆ ಕೊರೊನಾ ಸುರಕ್ಷಿತ ಸಾಮಗ್ರಿಗಳಿರುವ ಕಿಟ್‍ಗಳನ್ನು ವಿತರಿಸಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಪ್ರತಿ ಮತಗಟ್ಟೆಗೆ ಇಬ್ಬರು ಆರೋಗ್ಯ ಸಿಬ್ಬಂದಿ ಹಾಗೂ ಕೋವಿಡ್ ಸುರಕ್ಷತಾ ಸಾಮಗ್ರಿಗಳಿರುವ ಒಂದು ಕಿಟ್‍ನ್ನು ನೀಡಲಾಗುತ್ತದೆ.
ಪ್ರತಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನುಗುಣವಾಗಿ ಪ್ರತಿ ಕಿಟ್‍ನಲ್ಲಿ ಸ್ಯಾನಿಟೈಸರ್ ಬಾಟಲ್, ಫೇಸ್ ಶೀಲ್ಡ್‍ಗಳು, ಮಾಸ್ಕ್‍ಗಳು, ಹ್ಯಾಂಡ್ ಗ್ಲೌಸಗಳು, ಒಂದು ಥರ್ಮಲ್ ಸ್ಕ್ಯಾನರ್ ಉಪಕರಣ ಹಾಗೂ ಒಂದು ಬಯೋಮೆಡಿಕಲ್ ತ್ಯಾಜ್ಯಗಳ ವಿಲೇವಾರಿ ಮಾಡುವ ಡಿಸ್ಪೋಸಲ್ ಬ್ಯಾಗ್ ಇರುತ್ತದೆ.
ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗಾಗಿ ಸಿದ್ಧಗೊಳಿಸಿರುವ 416 ಮತಗಟ್ಟೆಗಳಿಗೆ (ಪ್ರತಿ ಮತಗಟ್ಟೆಗೆ ಇಬ್ಬರಂತೆ) ಒಟ್ಟು 832 ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಮತ ಚಲಾಯಿಸಲು ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ, ಸ್ಯಾನಿಟೈಸರ್ ನೀಡುವುದು, ಥರ್ಮಲ್ ಸ್ಕ್ಯಾನಿಂಗ್ ಮೂಲಕ ಜ್ವರ ತಪಾಸಣೆ ಮಾಡುವುದು, ಮತದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಸೇರಿದಂತೆ ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಮತಗಟ್ಟೆಯಲ್ಲಿ ಆರೋಗ್ಯ ಸಿಬ್ಬಂದಿಗಳು ನಿಗಾ ವಹಿಸುತ್ತಾರೆ. ಮತ್ತು ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತ ಹಾಗೂ ಶಂಕಿತರಿಗೆ ಮತದಾನ ಮಾಡಲು ರಾಜ್ಯ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿರುವುದರಿಂದ, ಅಂತಹವರಿಗೆ ಸುರಕ್ಷಿತವಾಗಿ ಎಲ್ಲಾ ಮುಂಜಾಗೃತೆಗಳೊಂದಿಗೆ ಮತದಾನ ಮಾಡಲು ಹಾಗೂ ಅಗತ್ಯವಿದ್ದಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರತಿ ತಾಲೂಕಿಗೆ ತಾಲೂಕಾ ವೈದ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತದಾನ ಕೇಂದ್ರಗಳಲ್ಲಿ ಕೋವಿಡ್ ಸುರಕ್ಷತೆಗಳನ್ನು ಪಾಲಿಸಲು ಅಗತ್ಯ ಕ್ರಮ ವಹಿಸುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
Kshetra Samachara
19/12/2020 10:05 pm