ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ದಿನದಿಂದ ದಿನಕ್ಕೆ ಕಾವು ಪಡೆಯ ತೊಡಗಿದೆ. ಕ್ಷೇತ್ರವೂ ತನ್ನದೇಯಾದ ಮತದಾರರನ್ನು ಹೊಂದಿರುವುದರಿಂದ ಸಾರ್ವಜನಿಕವಾಗಿ ಅಷ್ಟಾಗಿ ಮಹತ್ವ ಪಡೆಯದಿದ್ದರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ.
ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಅಧಿಕಾರದಲ್ಲಿದ್ದರೂ ತಮಗಾಗಿ ಮಾಡದ ಕಾಂಗ್ರೆಸ್ ಹಾಗೂ ಬಿಜೆಪಿ ಈಗ ಇಲ್ಲ ಸಲ್ಲದ ಭರವಸೆ ನೀಡುತ್ತಿವೆ ಎಂಬ ಅಸಮಾಧಾನ ಪದವೀಧರರ ಮತದಾರರಲ್ಲಿ ಎದ್ದು ಕಾಣುತ್ತಿದೆ.
ಪದವೀಧರ ಕ್ಷೇತ್ರದ ಮೂಲಕ ನಾಲ್ಕು ಬಾರಿ ವಿಧಾನ ಪರಿಷತ್ ಪ್ರವೇಶಿಸಿದ್ದ ಮಾಜಿ ಸಚಿವ ಎಚ್.ಕೆ ಪಾಟೀಲ , ಇದನ್ನು ಕಾಂಗ್ರೆಸ್ಸಿನ ಭದ್ರಕೋಟೆ ಮಾಡಿದ್ದರು. ಆದರೆ 2008 ಚುನಾವಣೆಯಲ್ಲಿ ಎಚ್ ಕೆ. ಪಾಟೀಲ ಬಿಜೆಪಿಯ ಮೋಹನ ಲಿಂಬಿಕಾಯಿ ಎದುರು ಸೋಲನ್ನು ಒಪ್ಪಿಕೊಳ್ಳಬೇಕಾಗಿತ್ತು. ನಂತರ ಸಂಕನೂರ ಬಿಜೆಪಿ ಗೆಲುವನ್ನು ಮುಂದುವರಿಸಿದ್ದರು.
2014 ರ ಚುನಾವಣೆಯಲ್ಲಿ ಎಸ್.ವಿ ಸಂಕನೂರ( ಬಿಜೆಪಿ) ಬಸವರಾಜ ಹೊರಟ್ಟಿ ಪುತ್ರ ವಸಂತ ಹೊರಟ್ಟಿ ( ಜೆಡಿಎಸ್ ) ಹಾಗೂ ಪಿ.ಎಚ್ ನೀರಲಕೇರಿ (ಕಾಂಗ್ರೆಸ್ ) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ಆ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮೂರನೆ ಸುತ್ತಿನ ನಂತರ ಬಿಜಪಿಯ ಎಸ್.ವಿ ಸಂಕನೂರಗೆ 22,496 ಮತಗಳು ಬಂದಿದ್ದರೆ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರ ಪುತ್ರ ವಸಂತ ಹೊರಟ್ಟಿ 8,589 ಪಡೆದಿದ್ದರು. ಆದರೆ ಇವರಿಬ್ಬರ ನಡುವಿನ ತೀವ್ರ ಹಣಾಹಣಿಯಿಂದ ಕಾಂಗ್ರೆಸ್ಸಿನ ಪಿ.ಎಚ್ ನೀರಲಕೇರಿ ಅವರು ಕೇವಲ 4,600 ಮತಗಳಿಗೆ ತೃಪ್ತಿ ಪಡೆದುಕೊಳ್ಳಬೇಕಾಗಿತ್ತು.
ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ದಯನೀಯ ಸೋಲಿಗೆ ಕಾರಣವಾಗಿದ್ದ ಜೆಡಿಎಸ್ ಈಗ ಕೊನೆ ಕ್ಷಣದಲ್ಲಿ ತಟಸ್ಥವಾಗಿರಲು ನಿರ್ಧರಿಸಿದ್ದು ಕುತೂಹಲ ಮೂಡಿಸಿದೆ. ತನ್ನ ಅಭ್ಯರ್ಥಿ ಶಿವಶಂಕರ ಕಲ್ಲೂರ ಅವರನ್ನು ತಟಸ್ಥ ಉಳಿಸಿದ್ದಲ್ಲದೆ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡಲು ಮಾಜಿ ಸಿ.ಎಂ ಕುಮಾರಸ್ವಾಮಿ ನಿರ್ಧರಿಸಿರುವುದು ಕಾಂಗ್ರೆಸ್ ಹಾಗೂ ಬಿಜೆಪಿಯ ನಿದ್ದೆಗೆಡಿಸಿದೆ.
ಅಂದರೆ ಕಳೆದ ಬಾರಿ ಬಿಜೆಪಿಗೆ ಸಾಕಷ್ಟು ಸ್ಪರ್ಧೆ ಒಡ್ಡಿದ್ದ ಜೆಡಿಎಸ್ ಈಗ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸುತ್ತಿರುವುದು ಬಿಜೆಪಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ಹಾಗೂ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮುಂಚೂಣಿಯಲ್ಲಿ ನಿಂತು ಪುತ್ರನ ಪರ ಪ್ರಚಾರ ಮಾಡಿದ್ದರಲ್ಲದೆ, ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಅವರು ಪದವೀಧರ ಮತದಾರರನ್ನು ಸುಲಭವಾಗಿ ಬಲ್ಲವರಾಗಿದ್ದಾರೆ. ಹೀಗಾಗಿ ಗುರಿಕಾರಗೆ ಹೊರಟ್ಟಿ ಬೆಂಬಲ ದೊರೆಯುತ್ತಿರುವುದರಿಂದ ಸ್ಪರ್ಧೆ ತುರುಸಾಗಬಹುದು.
ಅತ್ತ ಆರ್ ಆರ್ ನಗರ ಹಾಗೂ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿಯೂ ಸೋಲುಂಟಾಗಬಹುದೆಂಬ ಭಯ ಹೊಂದಿರುವ ಜೆಡಿಎಸ್, ಇಲ್ಲೂ ಮುಖಭಂಗ ಅನುಭವಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿರಬಹುದು. ಇದು ಕುಮಾರಸ್ವಾಮಿಯ ಚಾಣಾಕ್ಷ ನಡೆಯೋ ಅಥವಾ ಎರಡೂ ಪಕ್ಷಗಳಿಗೆ ಒಳ ಹೊಡೆತ ನೀಡುವ ತಂತ್ರವೋ ಎಂಬುದನ್ನು ಕಾಲವೇ ಉತ್ತರಿಸಬೇಕಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರವನ್ನು ಒಳಗೊಂಡಿರುವ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ, ಬಿಜೆಪಿಯ ಎಸ್.ವಿ ಸಂಕನೂರ ಹಾಗೂ ಕಾಂಗ್ರೆಸ್ಸಿನ ಕುಬೇರಪ್ಪ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿರುವುದುರಿಂದ ಪ್ರಚಾರಕ್ಕೆ ಅಭ್ಯರ್ಥಿಗಳು ಡಿಜಿಟಲ್ ಮಾಧಮದ ಮೊರೆ ಹೋಗಬೇಕಾಗಿದೆ.
Kshetra Samachara
23/10/2020 11:34 am