ಕುಂದಗೋಳ: ತಾಲೂಕಿನಾದ್ಯಂತ ಮುಂಗಾರು ಹಂಗಾಮು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಆದರೂ ಈವರೆಗೆ ಗೊಬ್ಬರ ಲಭ್ಯವಾಗಿಲ್ಲ. ಆದ್ದರಿಂದ ರೈತರ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಕೂಡಲೇ ಗೊಬ್ಬರ ಪೂರೈಸಬೇಕೆಂದು ಸಂಶಿ ಬೆಳೆ ರಕ್ಷಕ ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಗತ್ಯ ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ಮಾಡಲಾಗಿದೆ ಮತ್ತು ಗೊಬ್ಬರದ ಕೊರತೆಯಾಗಲ್ಲ ಎಂಬ ಮುಖ್ಯಮಂತ್ರಿಗಳು ಹಾಗೂ ಸಚಿವರ ಪೊಳ್ಳು ಭರವಸೆಗಳು ಹೇಳಿಕೆಗಷ್ಟೇ ಸೀಮಿತವಾಗಿವೆ ಎಂದು ದೂರಿದರು.
ಪಕ್ಕದ ಹಾವೇರಿ ಜಿಲ್ಲೆಯಲ್ಲೇ ಕೃಷಿ ಸಚಿವರಿದ್ದರೂ, ಅಗತ್ಯ ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂಬ ಹೇಳಿಕೆ ಕೇವಲ ತವರು ಜಿಲ್ಲೆಗಷ್ಟೇ ಅನ್ವಯವಾದಂತಿದೆ. ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಮರ್ಪಕ ಗೊಬ್ಬರ ಪೂರೈಕೆಯಾಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಕೃಷಿ ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಶೀಘ್ರವಾಗಿ ಅಗತ್ಯ ಪ್ರಮಾಣದ ಗೊಬ್ಬರ ಪೂರೈಸಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
20/05/2022 03:08 pm