ಧಾರವಾಡ: ಭಾರತ ದೇಶವು ಹಳ್ಳಿಗಳ ನಾಡಾಗಿದೆ. ಇಂದು ನಗರಗಳು ಬೆಳೆದರೂ ಸಹ ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ದೇಶವು ಪ್ರಗತಿಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ಮಹಾತ್ಮಾ ಗಾಂಧೀಜಿಯವರು ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಹೇಳುತ್ತಿದ್ದರು. ಆದ್ದರಿಂದ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.
ಸಂಜೀವಿನಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಿನ್ನೆ (ಸೆ.05)ದಿನ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ, ಸಂಜೀವಿನಿ ಯೋಜನೆಯಿಂದ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳ ಮೂಲಕ ಆಯ್ಕೆಗೊಂಡ ಕೃಷಿ ಸಖಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಹೊಸ ತಳಿಗಳು, ಕೃಷಿ ಪದ್ಧತಿ ಮತ್ತು ಇತರೆ ಕೃಷಿ ತಂತ್ರಜ್ಞಾನಗಳು ಕೇವಲ ದತ್ತು ಗ್ರಾಮಗಳ ರೈತರಿಗೆ ಮಾತ್ರ ಮುಟ್ಟುತ್ತಿವೆ. ಮುಂದಿನ ದಿನಗಳಲ್ಲಿ ಕೃಷಿ ಸಖಿಯರ ಸಹಾಯದಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ಮನೆ ಮನೆಗೂ ತಲುಪುತ್ತವೆ. ಬೆಳೆ ವಿಮೆ, ಕಿಸಾನ್ ಕ್ರೆಡಿಟ್ ಕಾರ್ಡ, ಕೌಶಲ್ಯಾಭಿವೃದ್ದಿಯಂತಹ ವಿವಿಧ ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ನೆರವಾಗುವಂತೆ ಕೃಷಿ ಸಖಿಯರಿಗೆ ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಿವಾನಂದ ಕರಾಳೆ ಮಾತನಾಡಿ, ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಅನೇಕ ಸಂಶೋಧನೆಗಳು ಕೇವಲ ಪ್ರಗತಿಪರ ರೈತರ ತಾಲೂಕುಗಳಲ್ಲಿ ಕಂಡು ಬರುತ್ತಿವೆ. ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆಯಂತಹ ನೂತನ ತಂತ್ರಜ್ಞಾನಗಳು ರೈತರ ಮನೆ ಬಾಗಲಿಗೆ ತಲುಪಲಿವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರಮಠ, ಅವರು ಕೃಷಿ ಸಖಿಯರನ್ನು ಆಯ್ಕೆ ಮಾಡಿದ ಹಿನ್ನೆಲೆ, ಅವರ ಕಾರ್ಯ ಚಟುವಟಿಕೆಗಳು ಮತ್ತು ತರಬೇತಿಯಿಂದ ಅವರು ಪಡೆಯಬಹುದಾದ ವಿಷಯ ಜ್ಞಾನದ ಕುರಿತು ಮಾತನಾಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್. ಹೂಗಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ರೈತಪರ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಸದುಪಯೋಗ ಪಡೆಯಲು ಮತ್ತು ಮುಂಬರುವ ಕೃಷಿ ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು. ಕೃಷಿ ಸಖಿಯರು ಮಾಹಿತಿಗಾಗಿ ಸೋಷಿಯಲ್ ಮೀಡಿಯಾ ಬಳಕೆ ಮಾಡಬೇಕು. ಕ್ಷೇತ್ರ ಭೇಟಿಗಳ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರಗಳ ನೋಡಲ್ ಅಧಿಕಾರಿ ಡಾ.ಶ್ರೀಪಾದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Kshetra Samachara
06/09/2022 06:01 pm