ಧಾರವಾಡ: ಮಕ್ಕಳನ್ನು ನೋಡುವುದೇ ಹಬ್ಬ. ಮಕ್ಕಳು ಸಮಾಜದ, ಧರ್ಮದ, ಪಾಲಕರ ಹಾಗೂ ನಮ್ಮೆಲ್ಲರ ಪಾಲಿನ ದೇವರು. ಮಕ್ಕಳಲ್ಲಿ ಅಗಾಧವಾದ ಶಕ್ತಿ ಇದ್ದು ಅದನ್ನು ಜಾಗೃತಗೊಳಿಸಿ ಪ್ರೇರಣೆ ನೀಡಿ ಅವರು ನಾಡಿನ, ಸಮಾಜದ ಶಕ್ತಿ ಕೇಂದ್ರಗಳಾಗುವಂತೆ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಕೊಡಗು, ಚಾಮರಾಜ ನಗರ, ಹಾಸನ, ಮಂಡ್ಯ, ಉಡುಪಿ, ಚಿಕ್ಕಮಗಳೂರು, ಮೈಸೂರು, ಮಂಗಳೂರು ಜಿಲ್ಲೆಗಳ ಸರ್ಕಾರಿ ಬಾಲಕರ, ಬಾಲಕಿಯರ ಬಾಲಮಂದಿರಗಳ ಅಭಿರಕ್ಷಣೆಯಲ್ಲಿರುವ ಮಕ್ಕಳಿಗೆ 7 ದಿನಗಳವರೆಗೆ ವಸತಿಯುತ ಮಕ್ಕಳ ಕಥಾ ಕಮ್ಮಟ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ರಚನೆಯಲ್ಲಿ ಮೊದಲು ಹುಟ್ಟಿರುವುದೇ ಕಥೆ. ಕಥೆಗಳು ಮಕ್ಕಳಲ್ಲಿ ಕುತೂಹಲ, ವಾಕ್‍ಚಾತುರ್ಯ, ಕಲ್ಪನಾ ಶಕ್ತಿ, ನಿರೀಕ್ಷಣೆ, ಬರವಣಿಗೆ, ಬೆಳವಣಿಗೆಗೆ ಸಹಾಯಕವಾಗಿರುತ್ತವೆ. ಕಲ್ಪನಾ ಶಕ್ತಿಯು ಮನುಷ್ಯನಿಗಿರುವ ಅದ್ಭುತವಾದ ಶಕ್ತಿಯಾಗಿದೆ. ಅದನ್ನು ಬಳಸಿಕೊಂಡು ಅಂತರಂಗದ ಕಲ್ಪನೆಗಳನ್ನು, ಭಾವನೆಗಳನ್ನು ಮಾತು ಹಾಗೂ ಬರವಣಿಗೆ ಮೂಲಕ ಹೊರಹಾಕುವುದೇ ಕಥೆ. ಕಾರ್ಯಾಗಾರಕ್ಕೆ ಬದಂತಹ ಮಕ್ಕಳು ಶಿಬಿರದ ಸದುಪಯೋಗವನ್ನು ಪಡೆದುಕೊಂಡು ಒಂದು ವೃಕ್ಷದಲ್ಲಿ ಹಲವಾರು ಬೀಜಗಳು ಇರುವಂತೆ ಹಲವಾರು ಕಥೆಗಳನ್ನು ರಚಿಸಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಅಕಾಡೆಮಿಯ ಸಂಸ್ಥಾಪನಾ ಅಧ್ಯಕ್ಷ ಶಂಕರ ಹಲಗತ್ತಿ, ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್, ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ಹಿರಿಯ ಸಾಹಿತಿ ಹ.ಮ ಪೂಜಾರ, ಶಿಬಿರದ ನಿರ್ದೇಶಕ ಡಾ.ನಿಂಗು ಸೊಲಗಿ, ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
Kshetra Samachara
17/08/2022 09:44 pm