ಧಾರವಾಡ: ನಮ್ಮ ನಾಡು ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಶೀಲತೆಯ ಬಂಡಾರವಾಗಿದೆ. ಭಾಷೆ ಹಾಗೂ ಸಂಸ್ಕೃತಿಗೆ ಅಗಾಧವಾದ ಸಂಬಂಧವಿದೆ. ಆಲೂರು ವೆಂಕಟರಾವ ಅವರು ಭಾಷೆಯ ಸಾಂಗತ್ಯವನ್ನು ಸಂಪೂರ್ಣವಾಗಿ ಅರಿತಿದ್ದರು ಮತ್ತು ಕರ್ನಾಟಕ ರಾಜ್ಯಕ್ಕೆ ಮೂರ್ತ ಕಲ್ಪನೆ ನೀಡಿದ ಮೊದಲ ನಾಯಕರಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿಕಟ ಪೂರ್ವ ನಿರ್ದೇಶಕ ಡಾ. ಬಸವರಾಜ ಕಲ್ಗುಡಿ ಅವರು ಹೇಳಿದರು.
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಆಲೂರು ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಆಲೂರು ವೆಂಕಟರಾವ ಅವರ 142 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಅನೇಕ ಭಾಷೆಗಳು ಕಣ್ಮರೆಯಾಗುತ್ತಿವೆ. ಭಾಷೆಯಿಲ್ಲದೇ ಬದುಕಿಲ್ಲ. ಕನ್ನಡ ಸಂಸ್ಕೃತಿಯಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳುವ ಸಂಸ್ಕಾರವಿದೆ. ಕನ್ನಡಕ್ಕೆ ಹೊಸ ರೀತಿಯ ಆಲೋಚನೆಯನ್ನು ನೀಡಿದವರು ಆಲೂರು ವೆಂಕಟರಾವರು. ಕನ್ನಡ ನಾಡಿನ ಭೂಪಟವನ್ನು ರೂಪಿಸುವಲ್ಲಿ ಆಲೂರು ವೆಂಕಟರಾವ ಅವರ ಕೊಡುಗೆ ಸಾಕಷ್ಟಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಟರಾವ ಅವರು ಭಾರತ ಸ್ವಾತಂತ್ರ್ಯಕ್ಕೂ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಟ್ರಸ್ಟ್‍ನ ಅಧ್ಯಕ್ಷ ಡಾ.ಪ್ರಮೋದ ಗಾಯಿ ಅವರು ಮಾತನಾಡಿ, ಸಂಸ್ಕೃತಿ ಮತ್ತು ಭಾಷೆಯ ನಡುವೆ ಅವಿನಾಭಾವ ಸಂಬಂಧವಿದೆ. ಇದನ್ನು ಮನಗಂಡಿದ್ದ ಆಲೂರು ವೆಂಕಟರಾವ ಅವರು ಕನ್ನಡ ಭಾಷೆ ಬಲ್ಲ ಕನ್ನಡಿಗರೆಲ್ಲ ನೆಲೆಸುವ ನಾಡು ಕರ್ನಾಟಕವಾಗಿ ರೂಪಗೊಳ್ಳಬೇಕು ಮತ್ತು ಭಾಷೆ ನಮ್ಮ ವಿಚಾರಧಾರೆಗೆ ಮೂಲಕಾರಣವಾಗಿ, ನಮ್ಮನ್ನು ಏಕೀಕರಣಗೊಳಿಸುತ್ತದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು ಆಲೂರು ವೆಂಕಟರಾವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Kshetra Samachara
12/07/2022 08:00 pm