ಧಾರವಾಡ: ಶಂಕರಾಚಾರ್ಯರ ತತ್ವ ವಿಚಾರಗಳನ್ನು ದೇಶದಲ್ಲಿನ ಸರ್ವ ಧರ್ಮದವರು ಅಳವಡಿಸಿಕೊಂಡರೆ ವಿಕಸನಶೀಲರಾಗಲು ಸಾಧ್ಯ. ಬೇರೆ ರಾಷ್ಟ್ರಗಳು ತತ್ವಜ್ಞಾನಿಗಳ ತತ್ವ, ಚಿಂತನೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ಅನುಸರಿಸಿ ಬಲಿಷ್ಠ ರಾಷ್ಟ್ರಗಳಾಗುತ್ತಿವೆ. ಭಾರತೀಯರು ಕೂಡ ಆ ನಿಟ್ಟಿನಲ್ಲಿ ಸಾಗಬೇಕಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ
ಹೇಳಿದರು.
ಧಾರವಾಡದ ಆಲೂರು ವೆಂಕಟರಾವ ಸಭಾ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆದಿ ಜಗದ್ಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಜಾಗೃತವಾಗಿರಬೇಕೆಂದರೆ ಧರ್ಮದ ಅನುಯಾಯಿಗಳೂ ಕೂಡ ಜಾಗೃತರಾಗಿರಬೇಕು. ತ್ಯಾಗ ಸೇವೆ ಎಂಬುವು ಋಷಿ, ಮುನಿಗಳಿಂದ ಬಂದಿವೆ. ಶಂಕರಾಚಾರ್ಯರಂತಹ ಜ್ಞಾನಿಗಳು ಪ್ರತಿ ಮನೆಗೊಬ್ಬರು ಹುಟ್ಟಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್. ಕುಮಾರ ಮಾತನಾಡಿ, ಶಂಕರಾಚಾರ್ಯರರು ದೇಶಪರ್ಯಟನೆ ಮಾಡಿ ನಾಲ್ಕು ಮಠಗಳನ್ನು ಸ್ಥಾಪಿಸುವುದರೊಂದಿಗೆ ಸನಾತನ ಧರ್ಮವನ್ನು ತಿದ್ದಿದವರು. ಜನಸಾಮಾನ್ಯರಿಗೆ ಅರ್ಥವಾಗುವಂತಹ ಸಾಹಿತ್ಯ ರಚಿಸಿ, ಸಾಮಾನ್ಯರು ಕೂಡ ಓದಿ ಅರ್ಥ ಮಾಡಿಕೊಳ್ಳಬಹುದಾದ ಕೃತಿಗಳನ್ನು ರಚಿಸಿದರು. ಅವರ ಸೌಂದರ್ಯ ಲಹರಿ ಅವರ ರಚನೆಗಳಲ್ಲಿ ಉತ್ತಮ ಉದಾಹರಣೆಯಾಗಿದೆ. ಈ ಕೃತಿ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಮನೆಗಳಲ್ಲಿ ಮಹಿಳೆಯರು ಪಠಿಸುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಮುಖಂಡರಾದ ಆರ್. ವಿ. ಪರ್ವತಿಕರ್, ನರೇಂದ್ರ ಕುಲಕರ್ಣಿ, ರಾಜೀವ ಪಾಟೀಲಕುಲಕರ್ಣಿ, ಉದಯ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kshetra Samachara
06/05/2022 09:38 pm