ಧಾರವಾಡ: ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಯಶಸ್ವಿ ಮುನ್ನಡೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಪ್ರಮುಖ ಆಧಾರವಾಗಿದೆ. ಬಾಬಾಸಾಹೇಬರ ಜನನ ಮತ್ತು ಬದುಕಿನ ಪ್ರಮುಖ ಕಾಲಘಟ್ಟಗಳಿಗೆ ಸಾಕ್ಷಿಯಾದ ಐತಿಹಾಸಿಕ ಸ್ಥಳಗಳನ್ನು ಜನತೆಗೆ ಸ್ಫೂರ್ತಿ ನೀಡುವ ಸ್ಮಾರಕಗಳನ್ನಾಗಿ ಭಾರತ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಕೇಂದ್ರವು 2 ಲಕ್ಷ 31 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಧಾರವಾಡ ಕವಿವ ಸಂಘದ ನಾಡೋಜ ಪಾಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಜೊತೆಗೆ ಸ್ವಾತಂತ್ರ್ಯ ಪಡೆದ ಅನೇಕ ರಾಷ್ಟ್ರಗಳು ಇಂದು ಪ್ರಜಾಪ್ರಭುತ್ವ, ಸಂಸದೀಯ ಸರ್ಕಾರ ಉಳಿಸಿಕೊಳ್ಳಲು ಪರದಾಡುತ್ತಿವೆ. ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಅನೇಕ ಅನುಮಾನ, ಟೀಕೆಗಳೊಂದಿಗೆ ಅಧಿಕಾರ ಹಸ್ತಾಂತರಿಸಿದ್ದರು. ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತ ಬಂದರೂ ಭಾರತ ಜಗತ್ತಿನ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆಯಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ, ತಥಾಕತಿಥವಾಗಿ ತಾವೇ ಶ್ರೇಷ್ಠ ಎಂದುಕೊಂಡಿದ್ದ ಅನೇಕ ಸಮುದಾಯಗಳು ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಆಚರಿಸುತ್ತಿದ್ದರು. ಅನೇಕ ನೋವುಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭವಿಸಿದ್ದರು. ಆ ಸಂವಿಧಾನ ಕರಡು ರಚನಾ ಸಮಿತಿಯ ಬಹುತೇಕ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಒಬ್ಬರೇ ಬಹುಪಾಲು ಶ್ರಮವಹಿಸಿ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಜನ್ಮಸ್ಥಳ ಮಧ್ಯಪ್ರದೇಶದ ಮಹೂ, ಲಂಡನ್ ವ್ಯಾಸಂಗದ ವೇಳೆ ವಾಸಿಸುತ್ತಿದ್ದ ಕೊಠಡಿ, ನಾಗಪುರದ ದೀಕ್ಷಾ ಭೂಮಿ, ದೆಹಲಿಯಲ್ಲಿ ವಾಸ ಮಾಡಿದ್ದ ನಿವಾಸ ಹಾಗೂ ಅಂತ್ಯಕ್ರಿಯೆ ಜರುಗಿದ ಚೈತ್ಯಭೂಮಿಯನ್ನು ಪ್ರೇರಣಾ ಸ್ಥಳಗಳನ್ನಾಗಿ ಭಾರತ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ಪರಿಶಿಷ್ಟ ಜಾತಿಯ ಕಲ್ಯಾಣಕ್ಕಾಗಿ 1 ಲಕ್ಷ 42 ಸಾವಿರ ಕೋಟಿ ರೂಪಾಯಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ 89 ಸಾವಿರ ಕೋಟಿ ರೂಪಾಯಿಗಳನ್ನು ಪ್ರಸಕ್ತ ಸಾಲಿನಲ್ಲಿ ಮೀಸಲಿಡಲಾಗಿದೆ. ವಿದ್ಯಾರ್ಥಿ ವೇತನ ಯೋಜನೆಗಾಗಿಯೇ 59 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಈ ವರ್ಗಗಳ ಜನ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಕಲಬುರ್ಗಿಯ ಸಾಹಿತಿ ವಿಠ್ಠಲ ವಗ್ಗನ್ ವಿಶೇಷ ಉಪನ್ಯಾಸ ನೀಡಿದರು.
Kshetra Samachara
14/04/2022 10:15 pm