ಧಾರವಾಡ: ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಧಾರವಾಡ ಕರ್ನಾಟಕ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳಕ್ಕೆ ಹಿರಿಯ ವಿದ್ವಾಂಸ ಹಾಗೂ ಲೇಖಕ ಡಾ.ಗುರುಲಿಂಗ ಕಾಪಸೆ ಚಾಲನೆ ನೀಡಿದರು.
ಡಾ.ಗುರುಲಿಂಗ ಕಾಪಸೆ ಮಾತನಾಡಿ, ಕರ್ನಾಟಕದಲ್ಲಿರುವ ಎಲ್ಲ ಪುಸ್ತಕ ಪ್ರಕಾಶನ ಸಂಸ್ಥೆಗಳು ಬಹಳ ವರ್ಷಗಳಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಕಟಣೆ ಮತ್ತು ವಿತರಣೆ ಕಾರ್ಯದಲ್ಲಿಯೂ ಯಶಸ್ವಿಯಾಗಿವೆ. ಹಲವಾರು ಹಳೆಯ ಪ್ರಕಟಣೆಗಳು ಈಗ ಉಪಲಬ್ಧವಿಲ್ಲ ಎಂದರೆ, ಅವುಗಳಿಗೆ ಬೇಡಿಕೆ ಇದೆ ಎಂದರ್ಥ. ಸಾಹಿತ್ಯ ಅಕಾಡೆಮಿಯು ಶತಮಾನದ ಸಂಪುಟಗಳ ಪುನರ್ ಮುದ್ರಣ ಮಾಡಬೇಕು. ಓದುವ ಹವ್ಯಾಸವನ್ನು ಬೆಳೆಸುವುದು. ಸಾಂಸ್ಕೃತಿಕ ಮನೋಧರ್ಮವನ್ನು ಹೆಚ್ಚಿಸುವುದು ಮುಖ್ಯ. ಇತರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಮಹತ್ವ ನೀಡಲಾಗುತ್ತಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಬಿ. ಗುಡಸಿ ಮಾತನಾಡಿ, ಪುಸ್ತಕ ಪ್ರಾಧಿಕಾರವು ಪ್ರಕಾಶಕರ ಪುಸ್ತಕಗಳನ್ನು ರಾಜ್ಯದ ಮೂಲೆಮೂಲೆಗಳಿಗೆ ತಲುಪಿಸುತ್ತಿದೆ. ಜೊತೆಗೆ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿ ಹರಡಲು ಪ್ರಯತ್ನಿಸುತ್ತಿದೆ. ಜನರಲ್ಲಿ ಓದುವ ಹವ್ಯಾಸ ಬೆಳೆಯಬೇಕು. ಧಾರವಾಡ ಸುತ್ತಮುತ್ತಲಿನ ಜನರಿಗೆ ಈ ಪುಸ್ತಕ ಮಾರಾಟ ಮೇಳ ವರವಾಗಿದೆ ಎಂದರು.
ಹಿರಿಯ ಸಾಹಿತಿ ಡಾ.ಶಾಂತಾ ಇಮ್ರಾಪೂರ ಮಾತನಾಡಿ, ಕನ್ನಡ ಪುಸ್ತಕ ಮಾರಾಟ ಮೇಳ ಸಾಹಿತ್ಯ ಪ್ರಿಯರಿಗೆ ಸಂತೋಷಕರ ವಿಷಯವಾಗಿದೆ. ಸಾವಿರಾರು ವೈವಿಧ್ಯಮಯ ಶೀರ್ಷಿಕೆಯ ಪುಸ್ತಕಗಳು ಮಾರಾಟ ಮೇಳದಲ್ಲಿ ಲಭ್ಯವಿವೆ. ಅನೇಕ ರೀತಿಯಿಂದ ನಮ್ಮ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರ ಸಮೃದ್ಧಗೊಳ್ಳುತ್ತಿದೆ. ಸಮೃದ್ಧ ಜ್ಞಾನ ಭಂಡಾರ ನಮ್ಮದಾಗಿಸಿಕೊಳ್ಳಬೇಕು. ಡಿಜಿಟಲ್ ಓದು ತಾತ್ಕಾಲಿಕ ಮಾಹಿತಿಯನ್ನು ಕೊಡುತ್ತದೆ. ಆಳವಾದ ಅಧ್ಯಯನ, ಸಮಗ್ರ ತಿಳುವಳಿಕೆ ನಮಗೆ ಲಭ್ಯವಾಗಬೇಕೆಂದರೆ ಗ್ರಂಥಗಳ ಜೊತೆಗೆ ಸಾಂಗತ್ಯವಿರಬೇಕು. ಗ್ರಂಥ ಸಂಗಾತಿಗಳಾಗಬೇಕು. ಯುವತಲೆಮಾರಿನ ಜನತೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಜೆ, ಆಡಳಿತಾಧಿಕಾರಿ ಕೆ.ಬಿ. ಕಿರಣಸಿಂಗ್, ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ,ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಮತ್ತಿತರರು ಇದ್ದರು.
ಏಪ್ರೀಲ್ 8 ರಿಂದ 13 ರವರೆಗೆ ಪುಸ್ತಕ ಮಾರಾಟ ಮೇಳ ಜರುಗಲಿದೆ.ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Kshetra Samachara
08/04/2022 09:36 pm