ಧಾರವಾಡ: ಭಾರತ ದೇಶದ ಸಮಸ್ತ ದಲಿತರ ಧ್ವನಿಯಾಗಿ ಶೋಷಣೆ ವಿರುದ್ಧ ಹೋರಾಡಿದ ಧೀಮಂತ ನಾಯಕ ಡಾ.ಬಾಬು ಜಗಜೀವನರಾಮ್ ಅವರು ದೇಶದ ಸಮಗ್ರ ಅಭಿವೃದ್ಧಿ ಹಾಗೂ ಮುನ್ನಡೆಗೆ ನೀಡಿದ ಕೊಡುಗೆಗಳು ಅಮೂಲ್ಯವಾದವು. ಅವರ ಆದರ್ಶ, ಕನಸುಗಳನ್ನು ಸಾಕಾರಗೊಳಿಸಲು ನಾವೆಲ್ಲ ಪಣತೊಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಧಾರವಾಡ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ಡಾ.ಬಾಬುಜಗಜೀವನರಾಮ್ ಜಯಂತಿ ಮುನ್ನಾದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಗಿನ ಕಾಲದ ಅನೇಕ ಸಂಕಷ್ಟಗಳ ನಡುವೆಯೂ ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹಂತಕ್ಕೆ ಏರಿದ ಡಾ.ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ಆಹಾರೋತ್ಪದನೆ ನೀಗಿಸಲು ಪರಿಹಾರ ಒದಗಿಸಿದರು. ಸುದೀರ್ಘ ಕಾಲ ಸಂಸತ್ತಿನ ಸದಸ್ಯರಾಗಿ ಅವರು ನೀಡಿದ ಜನಸೇವೆ ಹಾಗೂ ಸುಮಾರು 3 ದಶಕಗಳ ಕಾಲ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ಸೇವೆ ನೀಡಿದ ಹಿರಿಮೆ ಅವರದಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಏಳ್ಗೆಗಾಗಿ ಇಂದು ಸರ್ಕಾರ ಹಲವಾರು ಕಾರ್ಯಕ್ರಮಗಳ ಜಾರಿ ಮೂಲಕ ಆದ್ಯತೆ ನೀಡುತ್ತಿದೆ. ಶಿಕ್ಷಣದ ಮೂಲಕ ಮಾತ್ರ ಸಾಮಾಜಿಕ ಅಸಮಾನತೆ ನಿವಾರಿಸಿ ಸಮ ಸಮಾಜ ನಿರ್ಮಿಸಲು ಸಾಧ್ಯ , ಆ ನಿಟ್ಟಿನಲ್ಲಿ ಯುವಸಮುದಾಯ, ವಿದ್ಯಾರ್ಥಿಗಳು ಇಂತಹ ಮಹಾನ್ ನಾಯಕರ ಜಯಂತಿಗಳ ಮೂಲಕ ಪ್ರೇರಣೆ ಪಡೆಯಬೇಕು ಎಂದರು.
ಜೆ.ಎಸ್.ಎಸ್. ಪದವಿಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ.ಸದಾಶಿವ ನಡುವಿನಕೇರಿ ಅವರು ಆಧುನಿಕ ಭಾರತದ ನಿರ್ಮಾಣ ಮತ್ತು ಮುನ್ನಡೆಯಲ್ಲಿ ಡಾ.ಜಗಜೀವನರಾಮ್ ಅವರ ಚಿಂತನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಡಾ.ಬಾಬು ಜಗಜೀವನರಾಮ್ ಅವರು ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಅನೇಕ ಸಂಕಷ್ಟಗಳ ಮಧ್ಯೆ ಶಿಕ್ಷಣ ಪಡೆದು, ಮಹಾತ್ಮ ಗಾಂಧೀಜಿ,ಪಂಡಿತ ಮದನ ಮೋಹನ ಮಾಳವೀಯ ಅವರೊಂದಿಗೆ ಹೆಜ್ಜೆ ಹಾಕುತ್ತ, ದೇಶದ ಸಮಸ್ತ ದಲಿತರ ಧ್ವನಿಯಾಗಿ ಮಾತ್ರವಲ್ಲ, ಕೃಷಿ, ಸಾರಿಗೆ, ಆಹಾರ, ರೈಲ್ವೆ ಮಂತ್ರಿಗಳಾಗಿ ದೇಶದ ಮುನ್ನಡೆಗೆ ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಅಶೋಕ ದೊಡ್ಡಮನಿ, ಅರ್ಜುನ ವಡ್ಡರ, ಮಂಜುನಾಥ ಡೊಳ್ಳಿನ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ರೇಣುಕಪ್ಪ ಕೇಲೂರ, ಭೀಮರಾವ್ ಸವಣೂರ, ವಿದ್ಯಾ ನರಸಪ್ಪನವರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಭವಿಷ್ಯಾ ಮಾರ್ಟಿನ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಮಹಾದೇವಿ ಸಣ್ಣೇರ, ಕರ್ನಾಟಕ ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎ.ಹುಲಗೆಜ್ಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
04/04/2022 10:09 pm