ಧಾರವಾಡ: ಮತದಾರರ ಯಾದಿ ತಯಾರಿಕೆಯಲ್ಲಿ ಚುನಾವಣಾ ಆಯೋಗ ನಿರ್ಲಕ್ಷ ತೋರಿದೆ. ಇದರ ಪರಿಣಾಮ ಸಾವಿರಾರು ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಕೈ ಬಿಟ್ಟು ಹೋಗಿವೆ. ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳು ಕೂಡಲೇ ಪರಿಶೀಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಆಗ್ರಹಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪಶ್ಚಿಮ ಮತಕ್ಷೇತ್ರದ ವಿವಿಧ ಪ್ರದೇಶಗಳಿಗೆ ಸಮೀಕ್ಷೆ ನಡೆಸಿದ್ದು ಸಾಕಷ್ಟು ಕುಟುಂಬಗಳಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿ ಇದೆ. ಆದರೆ, ಮತಪಟ್ಟಿಯಲ್ಲಿ ಹೆಸರುಗಳಿಲ್ಲ. ಅಲ್ಲದೇ, ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಾಗಿ ಮಹಾನಗರ ಪಾಲಿಕೆಯಲ್ಲಿರುವ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳೇ ಇರೋದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಹ ಮತದಾರರು ಕೈ ಬಿಟ್ಟು ಹೋಗುವ ಸಾಧ್ಯತೆ ಇದೆ. ಇದು ಉದ್ದೇಶಪೂರ್ವಕವೂ ಇರಬಹುದು ಎಂದು ಆರೋಪಿಸಿದ ಅವರು, ಯಾವ ಪ್ರದೇಶದಲ್ಲಿ ಎಷ್ಟು ಮತದಾರರ ಹೆಸರುಗಳು ಕೈ ಬಿಟ್ಟಿವೆ ಎಂಬುದರ ಪಟ್ಟಿ ನೀಡಿದರು.
ಕೆಲಗೇರಿ ಆಂಜನೇಯನಗರದಲ್ಲಿ 400, ಜನ್ನತನಗರದಲ್ಲಿ 3000, ಲಕ್ಷ್ಮಿಸಿಂಗನಕೇರಿಯಲ್ಲಿ 2165, ಮಣಕಿಲ್ಲಾದಲ್ಲಿ 1070, ಜೈ ಭೀಮನಗರದಲ್ಲಿ 670, ಶ್ರೀರಾಮನಗರದಲ್ಲಿ 400 ಹೀಗೆ ವಿವಿಧೆಡೆ ಹಲವು ಮತದಾರರ ಹೆಸರು ಕೈ ಬಿಡಲಾಗಿದೆ. ಪಶ್ಚಿಮ ಕ್ಷೇತ್ರದಲ್ಲಿ 3,48398 ಅರ್ಹ ಮತದಾರರಿದ್ದು ಸದ್ಯ ಮತಪಟ್ಟಿಯಲ್ಲಿ 267679 ಮಾತ್ರ ಹೆಸರಗಳಿದ್ದು 80719 ಮತದಾರರ ಹೆಸರು ಎಲ್ಲಿ ಹೋಗಿವೆ ಎಂಬುದೇ ತಿಳಿಯುತ್ತಿಲ್ಲ. ಆಡಳಿತ ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ಬೇಕಾದ ಹೆಸರು ಸೇರ್ಪಡೆ ಹಾಗೂ ಬೇಡವಾದ ಹೆಸರು ತೆಗೆದು ಹಾಕುತ್ತಿದ್ದಾರೆ ಎಂಬ ಬಲವಾದ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಮಾಡಿದಾಗ ಮತದಾರರನ್ನು ಕೈ ಬಿಟ್ಟ ಸಂಗತಿ ಬಯಲಾಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪಕ್ರಿಯೆ. ಮತದಾನದ ಹಕ್ಕು ಈ ರೀತಿ ಕಸಿದುಕೊಳ್ಳುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ ಎಂದು ನೀರಲಕೇರಿ ಎಚ್ಚರಿಸಿದರು.
Kshetra Samachara
30/03/2022 08:14 pm