ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಟಕ ಕೇವಲ‌ ಮನರಂಜನೆಗೆ ಸೀಮಿತವಲ್ಲ, ಮನೋವಿಕಾಸ ಚಿಂತನೆಗೆ ಸಾಧನ: ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಧಾರವಾಡ: ಶಿವಸಂಚಾರ ರೆಪರ್ಟರಿಯು ಕಳೆದ 25 ವರ್ಷಗಳ ಅವಧಿಯಲ್ಲಿ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಆಧರಿಸಿ ಸುಮಾರು 73 ನಾಟಕಗಳನ್ನು ನೀಡಿದೆ. ನಾಟಕ ಕೇವಲ ಮನರಂಜನೆಯ ಮಾಧ್ಯಮವಲ್ಲ ಅದು ಮನಸ್ಸಿನ ವಿಕಾಸಕ್ಕೆ, ಚಿಂತನೆ ಮೂಡಿಸಲು ಅದು ಸಾಧನ, ಯಾವುದೇ ನಾಟಕ ಸಮಾಜಕ್ಕೆ ಉತ್ತಮ ಸಂದೇಶ ನೀಡದಿದ್ದರೆ ಅದು ಒಳ್ಳೆಯ ನಾಟಕವಲ್ಲ. ಬಟ್ಟೆಗಿಂತ ಬದುಕು ಶ್ರೇಷ್ಠ ವಾದದುದು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಧಾರವಾಡ ರಂಗಾಯಣದ ಡಾ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಇಂದು ಸಂಜೆ ರಂಗವೈಭವ ನಾಟಕೋತ್ಸವದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ರಂಗಭೂಮಿ ಸಮಾಜದ ಕನ್ನಡಿ ಇದ್ದ ಹಾಗೆ, ಸಮಾಜದ ಒಳಿತು ಕೆಡುಕನ್ನು ಮನ ಮುಟ್ಟುವಂತೆ ತೋರಿಸುವ ಶಕ್ತಿ ರಂಗಭೂಮಿಗೆ ಇದೆ. ರಂಗಭೂಮಿ ಎಂದೂ ಸಾಯುವುದಿಲ್ಲ. ಕೆಲಕಾಲ ಅದು ಬಂಜರಾಗಬಹು, ಸೂಕ್ತ ಪೋಷಣೆ ನೀಡಿದರೆ ಅದು ಸದಾ ಕಾಲ ಉತ್ಕೃಷ್ಟ ಫಲ ನೀಡುತ್ತದೆ. ನಾಟಕದ ಯಶಸ್ಸು ಕೇವಲ ಕೃತಿ, ನಿರ್ದೇಶಕ, ನಟ, ಪ್ರೇಕ್ಷಕನನ್ನು ಪ್ರತ್ಯೇಕವಾಗಿ ಅವಲಂಬಿಸಿರುವುದಿಲ್ಲ. ಈ ಎಲ್ಲಾ ಒಳಗೊಂಡ ಸಾಂಘಿಕ ಪ್ರಯತ್ನವನ್ನು ಆಧರಿಸಿದೆ. ನಾಟಕಕ್ಕೆ ಸಹೃದಯ ಪ್ರೇಕ್ಷಕರ ಪ್ರೋತ್ಸಾಹ ಬೇಕು. ಖಾದಿ, ಖಾವಿ, ಖಾಕಿ ಹೀಗೆ ನಾವು ಯಾವುದೇ ಬಟ್ಟೆ ಧರಿಸಿರಲಿ ಅದು ಮುಖ್ಯವಲ್ಲ. ಸರಿಯಾದ ಮಾರ್ಗದಲ್ಲಿ, ಆದರ್ಶಗಳೊಂದಿಗೆ ಬದುಕು ನಡೆಸುವುದು ಮುಖ್ಯ. ನಾಟಕಗಳನ್ನು ಕೇವಲ ಮನರಂಜನೆಗಾಗಿ ನೋಡಬಾರದು, ಚಿಂತನೆಯನ್ನು ರೂಪುಗೊಳಿಸಿಕೊಳ್ಳಲು ಪ್ರೇರಣೆ ಮಾಡಿಕೊಳ್ಳಬೇಕು ಎಂದರು.

ನಾಟಕದ ಚಾಲನೆ ನೀಡಿದ ಜಿಪಂ ಸಿಇಓ ಡಾ.ಸುರೇಶ ಇಟ್ನಾಳ ಮಾತನಾಡಿ, ಧಾರವಾಡ ರಂಗಾಯಣವು ಇಲ್ಲಿನ‌ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಸರ್ಕಾರ ಹಾಗೂ ಜಿಲ್ಲಾ ಪಂಚಾಯತ ಎಲ್ಲಾ ಸಹಕಾರ ನೀಡಲಾಗುವುದು ಎಂದರು.

ಅಥಣಿಯ ರಂಗಕರ್ಮಿ ಕೃಷ್ಣರಾಜ ಕುಂದರಗಿ ಮಾತನಾಡಿ, ರಂಗಭೂಮಿ ಸದಾ ಚಲನಶೀಲವಾದುದು ಎಲ್ಲಾ ಕಾಲಕ್ಕೂ ಅದು ಜೀವಂತವಾಗಿರುತ್ತದೆ. ಸಾಣೇಹಳ್ಳಿಯ ಮಠ ರಂಗಭೂಮಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮಾತನಾಡಿ, ಕೋವಿಡ್ ಮಧ್ಯೆಯೂ ಧಾರವಾಡ ರಂಗಾಯಣ ಅನೇಕ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶಿವಸಂಚಾರದ ನಾಟಕಗಳನ್ನು ಇದೇ ಮೊದಲಬಾರಿಗೆ ಇಲ್ಲಿ ಪ್ರದರ್ಶನ ಏರ್ಪಡಿಸಿರುವುದು ಸಂತಸ ತಂದಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ, ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ, ರಂಗಸಮಾಜದ ಸದಸ್ಯ ಸಿದ್ಧರಾಮ ಹಿಪ್ಪರಗಿ ಮತ್ತಿತರರು ವೇದಿಕೆಯಲ್ಲಿದ್ದರು.

ಬಸ್ ಕಂಡಕ್ಟರ್ ನಾಟಕ ಪ್ರದರ್ಶನ: ಬಿ.ಆರ್.ಅರಿಷಣಗೋಡಿ ವಿರಚಿತ, ವೈ.ಡಿ.ಬದಾಮಿ ನಿರ್ದೇಶನದ ಬಸ್ ಕಂಡಕ್ಟರ್ ನಾಟಕವನ್ನು ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಶಿವಸಂಚಾರ ರೆಪರ್ಟರಿ ತಂಡದ ಕಲಾವಿದರು ಪ್ರದರ್ಶಿಸಿದರು.

Edited By : PublicNext Desk
Kshetra Samachara

Kshetra Samachara

24/02/2022 08:09 pm

Cinque Terre

9.24 K

Cinque Terre

0

ಸಂಬಂಧಿತ ಸುದ್ದಿ